ಅಂತರಘಟ್ಟೆ ಶ್ರೀದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಸಂಪನ್ನ

| Published : Feb 09 2025, 01:16 AM IST

ಸಾರಾಂಶ

ಬೀರೂರು, ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಅಧಿದೇವತೆ ಅಂತರಘಟ್ಟೆ ಶ್ರೀ ದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ದೇವಿ ಅಡ್ಡಣಿಕೆ ಹೊತ್ತ ಶಾಸಕ ಕೆ.ಎಸ್.ಆನಂದ್ । ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆಯಲ್ಲಿ ಭಾಗಿ । ಹರಕೆ ತೀರಿಸಿದ ಭಕ್ತರು

ಕನ್ನಡಪ್ರಭ ವಾರ್ತೆ, ಬೀರೂರು

ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಅಧಿದೇವತೆ ಅಂತರಘಟ್ಟೆ ಶ್ರೀ ದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಶನಿವಾರ ಬೆಳಿಗ್ಗೆ ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಳೆದ ಒಂದು ವಾರದಿಂದ ಜಾತ್ರಾಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಶುಕ್ರವಾರ ರಾತ್ರಿ ಉತ್ಸವ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಮುತ್ತಿನೋತ್ಸವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು.

ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ದೇವಿ ಮೂಲವಿಗ್ರಹಕ್ಕೆ ಸಂಕಲ್ಪ ಸೇವೆಗಳ ಅಭಿಷೇಕ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇಗುಲದ ಪ್ರಾಂಗಣದಲ್ಲಿ ರಥ ಎಳೆಯುವ ಮುನ್ನ ದೇವಿ ಉತ್ಸವ ನಡೆಸಿದರು. ಈ ಬಾರಿ ವಿಶೇಷವಾಗಿ ವೀಣೆ ಆಕೃತಿಯ ಹೂವಿನ ಅಲಂಕಾರದೊಂದಿಗೆ ರಥಗೋಪುರ ನಿರ್ಮಾಣಗೊಳಿಸಿದ್ದು ಭಕ್ತರ ಕಣ್ಮನ ಸೆಳೆಯಿತು. ದೇವಿ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 7ಕ್ಕೆ ನಡೆದ ಬಲಿ ಪ್ರಧಾನಪೂಜೆ ನೆರವೇರಿಸಿ ನಂತರ ನೆರೆದಿದ್ದ ಸಹಸ್ರರಾರು ಭಕ್ತರು ದೇವಿ ರಥವನ್ನು ಹರ್ಷೋದ್ಗಾರದೊಂದಿಗೆ ಎಳೆದು ಸಂಭ್ರಮಿಸಿದರು. ದೇವಿ ಉತ್ಸವ ಮೂರ್ತಿಯನ್ನು ರಥದಿಂದ ಇಳಿಸುವ ಮುನ್ನ ಬಾಳೆಹಣ್ಣಿನ ರಾಶಿಪೂಜೆಯೊಂದಿಗೆ ರಥೋತ್ಸವ ಸಂಪನ್ನ ಗೊಳಿಸಲಾಯಿತು.

ರಥ ಸಾಗುತ್ತಿದ್ದಂತೆ ಹರಕೆ ಹೊತ್ತಿದ್ದ ಭಕ್ತರು ಕಾಳು ಮೆಣಸು, ಕೊಬ್ಬರಿ, ಕಡ್ಲೆಕಾಯಿ, ಬಾಳೆಹಣ್ಣು ಜೊತೆಗೆ ಕೋಳಿಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಕಡೂರು, ತರೀಕೆರೆ, ಅಜ್ಜಂಪುರ, ಹೊಸದುರ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಭಾಗಗಳಿಂದ ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲ ಗ್ರಾಮೀಣ ಭಾಗದ ಭಕ್ತರು ಸಾಂಪ್ರಾದಾಯಿಕವಾಗಿ ಅಲಂಕೃತಗೊಂಡ ಎತ್ತಿನಗಾಡಿಗಳೊಂದಿಗೆ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ತೊಡಗಿಸಿಕೊಂಡರು. ಶಾಸಕರಾದ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ರಥದ ಬಳಿ ವಿಶೇಷ ಪೂಜೆ ಸಲ್ಲಿಸಿದರು. ಕಡೂರು ಪ್ರಭಾರ ತಹಸೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ, ಅಂತರಘಟ್ಟೆ ಗ್ರಾಪಂ ಅಧ್ಯಕ್ಷ ಕರಿಯಪ್ಪ, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ಕಂಸಾಗರ ಸೋಮಶೇಖರ್, ಅರೇಹಳ್ಳಿ ಶಿವು ಸೇರಿದಂತೆ ಕಂದಾಯ ವಿಭಾಗದ ಅಧಿಕಾರಿಗಳು ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ದೇವಾಲಯ ಮುಜರಾಯಿ ಇಲಾಖೆಯ ಸುರ್ಪದಿಗೆ ಒಳಪಡುವ ಹಿನ್ನಲೆಯಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಪಂಚಾಯಿತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಯಿತು. ಅಂತರಘಟ್ಟೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು. ಜಾತ್ರಾ ಸಮಿತಿ ಸೇರಿದಂತೆ ಸಂಘ ಸಂಸ್ಥೆಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು. ವಾರಾಂತ್ಯದ ರಜೆ ಹಿನ್ನಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಭಕ್ತರ ಪ್ರಮಾಣ ಹೆಚ್ಚಾಗಿ ನೂಗುನುಗ್ಗಲು ಕಂಡು ಬಂದಿತು. ಜನಸಂಖ್ಯೆ ದಟ್ಟಣಿ ಹೆಚ್ಚಾದ ಹಿನ್ನಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸಂಜೆಯವರೆಗೂ ಕಾಡಿತು. ದೇವಸ್ಥಾನಕ್ಕೆ ಬರುವ ಭಕ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.-- ಬಾಕ್ಸ್ ಸುದ್ದಿ --

ಅಂತರಘಟ್ಟೆ ಜಾತ್ರೆಗೆ ಹೋಗುತ್ತಿದ್ದ ಎತ್ತಿನಗಾಡಿಗಳನ್ನು ನೋಡುತ್ತಿದ್ದ ಗಡಿಹಳ್ಳಿ ನಿವಾಸಿ ಗಾಡಿ ಹರಿದು ಮೃತಪಟ್ಟಿರುವ ಅವಘಡ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜನರು ಜಾತ್ರೆ ಮತ್ತಿತರ ಮಹೋತ್ಸವಗಳಲ್ಲಿ ಬಹಳ ಜಾಗರೂಕರಾಗಿ ಇರಬೇಕು. ಗಾಡಿಗಳನ್ನು ಓಡಿಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಜಾತ್ರೆಯ ಖುಷಿಯನ್ನು ಅನುಭವಿಸಬೇಕೊ ಹೊರತು ಅಹಿತಕರ ಘಟನೆಗಳಿಗೆ ಕಾರಣವಾಗಬಾರದು. ಮುಂಜಾಗ್ರತೆ ಎಲ್ಲರಲ್ಲೂ ಇದ್ದು ಎಚ್ಚರ ವಹಿಸಬೇಕು.

- ಕೆ.ಜೆ.ಕಾಂತರಾಜ್. ಎಸಿ ತರೀಕೆರೆ.

8ಬೀರೂರು1ಕಡೂರು ತಾಲೂಕಿನ ಅಂತರಘಟ್ಟೆ ಶ್ರೀ ದುರ್ಗಾಂಬ ದೇವಿ ಬ್ರಹ್ಮರಥೋತ್ಸವ ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಅಂತರಘಟ್ಟೆ ದುರ್ಗಾಂಬೆ ದೇವಿ ಮೂಲ ವಿಗ್ರಹಕ್ಕೆ ರಥೊತ್ಸವದ ಅಂಗವಾಗಿ ಶನಿವಾರ ವಿಶೇಷ ಅಲಂಕಾರ ಮಾಡಲಾಗಿತ್ತು.