ಸಾರಾಂಶ
ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ:ಮುಂಗಾರು ಆರಂಭದಲ್ಲಿ ಸಂಪೂರ್ಣ ಮಳೆಯಾಗಿದ್ದರಿಂದ ರೈತರು ಹರ್ಷಗೊಂಡು ಕೃಷಿ ಚಟುವಟಿಕೆ ಆರಂಭಿಸಿದ್ದರು. ಹೊಲ ಮಾಗಿ ಮಾಡುವ ಜತೆಗೆ ನಾನಾ ಬೆಳೆ ಬಿತ್ತನೆ ಮಾಡಿದ್ದರು. ಬಿತ್ತನೆ ಬಳಿಕ ಮಳೆಯಾಗದೆ ಬೆಳೆಗಳು ಬಾಡುತ್ತಿವೆ.
೩೯೨೬೭ ಹೆಕ್ಟೇರ್ ಬಿತ್ತನೆ:ಯಲಬುರ್ಗಾ ತಾಲೂಕಿನ ಎರೆ ಹಾಗೂ ಮಸಾರಿ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಸಜ್ಜೆ, ಮೆಕ್ಕೆಜೋಳ, ಹೆಸರು, ಅಲಸಂದಿಯನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ಯಲಬುರ್ಗಾ ಹೋಬಳಿಯಲ್ಲಿ ೯೮೧೫ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ೪೦೧೫ ಸಜ್ಜೆ, ೧೨೧೫ ತೊಗರಿ, ೫೧೧೫ ಹೆಸರು, ೧೧೫ ಅಲಸಂದಿ, ೧೨೫ ಹೆಕ್ಟೇರ್‌ನಲ್ಲಿ ಎಳ್ಳು ಬಿತ್ತನೆಗೊಂಡಿದೆ. ಇನ್ನೂ ಹಿರೇವಂಕಲಕುಂಟಾ ಹೋಬಳಿಯಲ್ಲಿ ೮೪೨೫ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ೬೭೨೫ ಸಜ್ಜೆ, ೧೪೭೫ ತೊಗರಿ, ೫೨ ಹೆಸರು, ೨೨೫ ಅಲಸಂದಿ, ೧೯೫ ಹೆಕ್ಟೇರ್‌ನಲ್ಲಿ ಎಳ್ಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು ೩೯,೨೬೭ ಹೆಕ್ಟೇರ್ ಪ್ರದೇಶದಲ್ಲಿ ನಾನಾ ಬೀಜಗಳು ಬಿತ್ತನೆಗೊಂಡಿವೆ.
ಸಾವಿರಾರು ರೂಪಾಯಿ ಖರ್ಚು:ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂದು, ನಾಳೆಯಾದರೂ ಮಳೆ ಆದೀತು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ತೇವಾಂಶ ಕೊರತೆಯಿಂದ ಬೆಳೆಗಳು ಮಾತ್ರ ದಿನದಿಂದ ದಿನಕ್ಕೆ ಒಣಗಲು ಆರಂಭಿಸಿವೆ.ಮಳೆ ಕೈಕೊಟ್ಟ ಪರಿಣಾಮ ಮೆಕ್ಕೆಜೋಳ, ಸಜ್ಜೆ, ಅಲಸಂದಿ, ಹೆಸರು ಬೆಳೆ ಬಾಡುತ್ತಿವೆ. ಅಲ್ಲದೆ ಮೆಕ್ಕೆಜೋಳ, ಹೆಸರು ಬೆಳೆಗೆ ಕೀಟಬಾಧೆ ಹೆಚ್ಚಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಇತ್ತಕಡೆ ಗಮನಹರಿಸಿ ಬೆಳೆ ಸಮೀಕ್ಷೆ ನಡೆಸುವ ಮೂಲಕ ರೈತರಿಗೆ ಪರಿಹಾರ ನೀಡಬೇಕು.
ಮಂಜುನಾಥ ಕಳಸಪ್ಪನವರ, ಬಂಡಿಹಾಳ ರೈತ