ಸಾರಾಂಶ
ಕಾರವಾರ: ವಿಶೇಷಚೇತನ ಮಹಿಳೆಯ ಅನುಕೂಲಕ್ಕೆಂದು ನಿರ್ಮಿಸಿದ ಫುಟ್‌ಬ್ರಿಜ್ ಇದೀಗ ಅಂಗವೈಕಲ್ಯದಿಂದ ಬಳಲುತ್ತಿದೆ. ಬ್ರಿಜ್‌ನ ಎರಡೂ ಕಡೆ ಪಿಚಿಂಗ್ ನಿರ್ಮಿಸಿ ಮಣ್ಣು ತುಂಬದೆ ಇರುವುದರಿಂದ ಕಾಲು ಸೇತುವೆ ಸಂಪರ್ಕಿಸಲು ಮರದ ದಿಮ್ಮಿಗಳನ್ನು ಹಾಕಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
ಇದು ಪ್ರಸಿದ್ಧ ಪ್ರವಾಸಿ ತಾಣ ಕುಮಟಾ ತಾಲೂಕಿನ ಯಾಣದಲ್ಲಿ ವಿಶೇಷ ಚೇತನ ಮಹಿಳೆ ದೇವಕಿ ನಾರಾಯಣ ಮರಾಠಿ ಹೈರಾಣಾಗಿರುವ ವಿದ್ಯಮಾನ.ವಿಶೇಷಚೇತನಳಾಗಿ ಕಾಡಿನ ನಡುವೆ ಏಕಾಂಗಿಯಾಗಿ ಬದುಕುತ್ತಿರುವ ದೇವಕಿ ಮರಾಠಿ ಎಂಬಾಕೆಗೆ ರಸ್ತೆ ಸಂಪರ್ಕಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 5 ವರ್ಷದ ಹಿಂದೆ ಚಂಡಿಕಾ ನದಿಗೆ ಕಾಲು ಸೇತುವೆ ನಿರ್ಮಿಸಲಾಯಿತು. ಚಂಡಿಕಾ ನದಿ ದಾಟಲು ಸೇತುವೆ ರೆಡಿ ಆದ ಖುಷಿಯಲ್ಲಿ ದೇವಕಿ ಮರಾಠಿ ಇರುವಾಗಲೆ ಕಾಮಗಾರಿ ನಿರ್ವಹಿಸುತ್ತಿದ್ದವರು ನಾಪತ್ತೆಯಾದರು. ಆ ಕಾಲು ಸೇತುವೆಯ ಎರಡೂ ಕಡೆ ಪಿಚಿಂಗ್ ನಿರ್ಮಿಸಿ ಮಣ್ಣು ತುಂಬುವ ಕೆಲಸ ಇದುವರೆಗೂ ಆಗಲಿಲ್ಲ. ವಿಶೇಷ ಚೇತನಳಾದ ದೇವಕಿ ಮರಾಠಿಗೆ ಆ ಸೇತುವೆಗೆ ಹೇಗೆ ಹೋಗಬೇಕೆಂಬುದೆ ಸಮಸ್ಯೆಯಾಯಿತು.
ದೇವಕಿ ಮರಾಠಿ ಈಗ ಪ್ರತಿ ವರ್ಷ ಅಡಕೆ ಮರದ ದಿಮ್ಮಿಗಳನ್ನು ಸೇತುವೆಯ ಎರಡೂ ಕಡೆ ಅಳವಡಿಸಿಕೊಂಡು ಪ್ರಯಾಸಪಟ್ಟು ಸಂಚರಿಸುತ್ತಾರೆ. ದೇಹದ ಬಲಭಾಗ ದುರ್ಬಲವಾಗಿರುವ ದೇವಕಿ ಅಪಾಯಕರ ರೀತಿಯಲ್ಲಿ ಸಂಚರಿಸಬೇಕಾಗಿದೆ. ಈ ಸೇತುವೆಯ ಎರಡೂ ಕಡೆ ಮಣ್ಣು ತುಂಬಿಕೊಡುವಂತೆ ಅರ್ಜಿ ಹಿಡಿದು ಅಲೆದಾಡಿದ್ದಾರೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ. ಸೇತುವೆ ನಿರ್ಮಿಸಿಯೂ ಸುಗಮ ಸಂಚಾರ ಸಾಧ್ಯವಾಗದ ಈ ಸ್ಥಿತಿಯ ಬಗ್ಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ದೇವಕಿ ಮರಾಠಿ ನೊಂದು ನುಡಿಯುತ್ತಾರೆ.ಅನುಕೂಲ ಕಲ್ಪಿಸುತ್ತೇನೆ: ವಿಶೇಷಚೇತನ ಮಹಿಳೆಗೆ ಫುಟ್‌ಬ್ರಿಜ್ ನಾನೇ ಮಂಜೂರು ಮಾಡಿಸಿದ್ದು, ಗುತ್ತಿಗೆದಾರರು ನಷ್ಟ ಉಂಟಾಯಿತು ಎಂದು ಕೆಲಸ ನಿಲ್ಲಿಸಿರುವ ಬಗ್ಗೆ ಮಾಹಿತಿ ಬಂದಿದೆ. ಆ ಸೇತುವೆ ವೀಕ್ಷಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉಳಿದ ಕಾಮಗಾರಿಗೆ ಶಾಸಕರ ನಿಧಿ ಅಥವಾ ಸರ್ಕಾರದಿಂದ ಹಣ ಒದಗಿಸಿ ವಿಶೇಷ ಚೇತನ ಮಹಿಳೆಯ ಓಡಾಟಕ್ಕೆ ಅನುಕೂಲ ಕಲ್ಪಿಸುತ್ತೇನೆ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.ಸಂಪರ್ಕ ರಸ್ತೆಗೆ ವಿನಂತಿ: ನಾನು ಮನೆಯಲ್ಲಿ ಒಬ್ಬಂಟಿಯಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಆಗಾಗ ತೆರಳಬೇಕು. ಪಡಿತರ, ಇತರ ಸಾಮಗ್ರಿ ತರುವುದಕ್ಕೆ ಇದೆ ಸೇತುವೆ ಮೇಲೆ ಓಡಾಡಬೇಕು. ಇತರ 3-4 ಮನೆಯವರಿಗೂ ಇದೇ ಸೇತುವೆ ಆಧಾರ. ಆದರೆ ಸೇತುವೆಗೆ ಎರಡೂ ಕಡೆ ಸಂಪರ್ಕವೇ ಇಲ್ಲ. ಐದು ವರ್ಷಗಳಿಂದ ನಾನೇ ವೆಚ್ಚ ಮಾಡಿ ಕಾಲುಸಂಕ ಹಾಕಿಸಿಕೊಳ್ಳುತ್ತೇನೆ. ಈ ಬಾರಿ ಗ್ರಾಪಂದವರು ಕಾಲು ಸಂಕದ ಹಣ ಕೊಡುವುದಾಗಿ ಹೇಳಿದ್ದಾರೆ. ಈ ಕಾಲು ಸೇತುವೆಗೆ ಸಂಪರ್ಕ ರಸ್ತೆ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ ಎಂದು ವಿಶೇಷ ಚೇತನ ಮಹಿಳೆ ದೇವಕಿ ಮರಾಠಿ ಹೇಳಿದರು.