ಸಾರಾಂಶ
ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬರೆದವರು ಜರ್ಮನ್ನರು. ಆದರೆ ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸ, ತತ್ತ್ವಶಾಸ್ತ್ರವನ್ನು ಬರೆದುಕೊಂಡಿದ್ದಾರೆ. ಆರ್ಯರು ಹೊರಗಿನವರು ಎಂಬ ವಾದವನ್ನೇ ಮುಂದಿಡುತ್ತಾರೆ. ನಾವು ಬ್ರಿಟಿಷರು ಬರೆದ ಇತಿಹಾಸವನ್ನೇ ಓದುವಂತಾಗಿದೆ. ಅದು ಬದಲಾಗಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಸಾಮ್ರಾಜ್ಯ ರಕ್ಷಣೆಗಾಗಿ ಬ್ರಿಟಿಷರು ಭಾರತೀಯ ಇತಿಹಾಸ, ತತ್ವಶಾಸ್ತ್ರವನ್ನು ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.ಕೆ.ನಲ್ಲತಂಬಿ ಅವರು ಅನುವಾದಿಸಿರುವ ತಮ್ಮ ವಂಶವೃಕ್ಷ ಕಾದಂಬರಿಯ ತಮಿಳು ಅನುವಾದಿತ ಕೃತಿ ವಂಶವೃಕ್ಷಂ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ತತ್ವಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬರೆದವರು ಜರ್ಮನ್ನರು. ಆದರೆ ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸ, ತತ್ತ್ವಶಾಸ್ತ್ರವನ್ನು ಬರೆದುಕೊಂಡಿದ್ದಾರೆ. ಆರ್ಯರು ಹೊರಗಿನವರು ಎಂಬ ವಾದವನ್ನೇ ಮುಂದಿಡುತ್ತಾರೆ. ನಾವು ಬ್ರಿಟಿಷರು ಬರೆದ ಇತಿಹಾಸವನ್ನೇ ಓದುವಂತಾಗಿದೆ. ಅದು ಬದಲಾಗಬೇಕು ಎಂದರು.ನ್ಯಾಯಾಲಯಗಳಲ್ಲಿ ವಾದ ಹಾಗೂ ತೀರ್ಪು ನೀಡಲು ಮುಲ್ಲಾ ಆ್ಯಂಡ್ ಮುಲ್ಲಾ ಅವರ ಕೃತಿಯನ್ನೇ ವಕೀಲರು ಹಾಗೂ ನ್ಯಾಯಾಧೀಶರು ಅಧ್ಯಯನ ನಡೆಸುತ್ತಿದ್ದರು. ಆದರೂ ಅದರ ಅಧ್ಯಯನ ಸಾಕಾಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ನ್ಯಾಯಮೂರ್ತಿ ಗೋವಿಂದ ಭಟ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ವಂಶವೃಕ್ಷ ಕಾದಂಬರಿ ಓದಿದರೆ ಹಿಂದೂ ಕಾನೂನುಗಳು ಸರಿಯಾಗಿ ಅರ್ಥವಾಗುತ್ತವೆ ಎಂದಿದ್ದಾಗಿ ಅವರು ಸ್ಮರಿಸಿದರು.
ನಂತರ ಪಿ.ವಿ. ಕಾಣೆ ಅವರ ಹಿಸ್ಟರಿ ಆಫ್ ಧರ್ಮಶಾಸ್ತ್ರ ಓದಬೇಕು. ಏಕೆಂದರೆ 10 ಸಂಪುಟಗಳ ಆ ಕೃತಿ ಬರೆಯಲು ಸುಮಾರು 40 ವರ್ಷವನ್ನು ತೆಗೆದುಕೊಂಡಿದ್ದಾರೆ. ಅಷ್ಟು ಆಳ ಅಧ್ಯಯನವಿದೆ ಎಂದು ಅವರು ಹೇಳಿದರು.ನನ್ನ ಬಹುತೇಕ ಕಾದಂಬರಿ ದೇಶದ ಎಲ್ಲಾ ಭಾಷೆಗೂ ಅನುವಾದವಾಗಿದ್ದರೂ ಯಾಕೋ ತಮಿಳಿಗೆ ಹೆಚ್ಚಾಗಿ ಅನುವಾದ ಆಗಿರಲಿಲ್ಲ. ಈಗ ಅಲ್ಲಿಯೂ ಪುಸ್ತಕ ಬಂದಿದೆ. ನನ್ನ ಕೃತಿಯ ಅನುವಾದಕ್ಕೆ ನಾನು ಸುಲಭವಾಗಿ ಒಪ್ಪುವುದಿಲ್ಲ. ಆದರೆ ಡಾ. ಚಂದ್ರಶೇಖರ್ ಅವರು ನಲ್ಲತಂಬಿ ಅವರ ಕುರಿತು ಹೇಳಿದ ಮೇಲೆ ಒಪ್ಪಿದೆ ಎಂದರು.
ನಲ್ಲತಂಬಿ ಅವರ 51ನೇ ಅನುವಾದಿತ ಕೃತಿ ಇದಾಗಿದೆ. ಲೇಖಕ ಪಾವಣ್ಣನ್, ‘ ಝೀರೊ ಡಿಗ್ರಿ’ ಪ್ರಕಾಶನದ ರಾಮ್ ಜೀ ನರಸಿಂಹನ್, ಆರ್. ಗಾಯತ್ರಿ ಇದ್ದರು.