ಸಾರಾಂಶ
ರಾಮನಗರ: ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಅತಿ ಜರೂರಾಗಿದ್ದ ಮೇಕೆದಾಟು ಅಣೆಕಟ್ಟೆ, ರೈಲ್ವೆ ಯೋಜನೆಗಳು, ರೇಷ್ಮೆ ಸೇರಿದಂತೆ ಯಾವೊಂದು ಯೋಜನೆಗಳ ಬಗ್ಗೆಯೂ ಪ್ರಸ್ತಾಪ ಮಾಡದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಶನಿವಾರ ಮಂಡಿಸಿದ ಕೇಂದ್ರ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ.
ಕೇಂದ್ರ ಬಜೆಟ್‌ನಲ್ಲಿ ಬೊಂಬೆ ಹಾಗೂ ಆಟಿಕೆಗಳ ತಯಾರಿಕೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಒತ್ತು ನೀಡಲಾಗಿದೆ. ಇದು ಚನ್ನಪಟ್ಟಣದ ಅಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವ ಆಶಯ ವ್ಯಕ್ತವಾಗಿದೆ. ಇದನ್ನು ಹೊರತು ಪಡಿಸಿದರೆ ರಾಮನಗರ ಜಿಲ್ಲೆಗೆ ಮಹತ್ವದ ಕೊಡುಗೆಗಳೇನು ಸಿಕ್ಕಿಲ್ಲ. ರಾಜ್ಯ ಸರ್ಕಾರ ಹಾಗೂ ಸಂಸದರು ಅನೇಕ ಯೋಜನೆಗಳನ್ನು ಸಾಕಾರಗೊಳಿಸುವ ಕುರಿತು ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ.ಅಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರಚಿಸುವುದು, ಕೌಶಲ್ಯವನ್ನು ವೃದ್ಧಿಗೊಳಿಸುವುದು, ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಉದ್ದೇಶ ಪರಿಣಾಮಕಾರಿಯಾಗಿ ಜಾರಿಯಾದರೆ ಚನ್ನಪಟ್ಟಣದ ಅಟಿಕೆ ಉದ್ಯಮಕ್ಕೆ ಪೂರಕವಾಗಬಹುದು ಎಂಬ ಅಭಿಪ್ರಾಯ ಗೊಂಬೆ ಉದ್ದಿಮೆದಾರರಿಂದ ವ್ಯಕ್ತವಾಗಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಉತ್ತಮ ಗುಣ-ಮಟ್ಟದ ಅನನ್ಯ, ನವೀನ ಅಟಿಕೆಗಳ ತಯಾರಿಕಾ ಉದ್ದೇಶವನ್ನು ವಿತ್ತ ಸಚಿವರು ವ್ಯಕ್ತಪಡಿಸಿರುವುದು ಈ ಉದ್ಯಮಕ್ಕೆ ಪೂರಕ ಅಂಶವಾಗಲಿದೆ. ಆದರೆ ಈ ಯೋಜನೆಯ ಅನುಷ್ಠಾನದ ಮೇಲೆ ಎಲ್ಲವೂ ಅವಲಂಭಿಸಿದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿದೆ.
ಈ ಬಾರಿ ಕೇಂದ್ರ ಸರ್ಕಾರ ಮಧ್ಯಮ ವರ್ಗದವರನ್ನು ಗುರಿಯಾಗಿರಿಸಿಕೊಂಡು ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಿದೆ. ಇದು ಸಾವಿರಾರು ವೇತನದಾರರಿಗೆ ಉಪಯೋಗವಾಗಲಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗಿದೆ. ರೇಷ್ಮೆನಗರಿಯ ರೈತರು ಗೂಡಿನ ಬೆಲೆಯಿಂದ ಹೈರಾಣಾಗಿದ್ದಾರೆ. ದೇಶಿ ರೇಷ್ಮೆಯ ಬೆಲೆಯಲ್ಲಿ ಹೆಚ್ಚಳ ಕಾಣುತ್ತಲೇ ಇಲ್ಲ. ಆಮದು ರೇಷ್ಮೆಯ ದರಗಳನ್ನು ಹೆಚ್ಚಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಗೆ ಹಾಲಿ ಪದ್ಧತಿಯಲ್ಲಿ ಸುಧಾರಣೆ ತರುವುದು ಅಥವಾ ನೂತನ ಪದ್ಧತಿಯನ್ನು ಜಾರಿಗೆ ತರಬೇಕೆಂಬ ಕೂಗಿಗೆ ಕೇಂದ್ರ ಸರ್ಕಾರ ಸೊಪ್ಪು ಹಾಕದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿರುವ ಕಾರಣ ಟ್ರಾಮಾ ಸೆಂಟರ್ ಸ್ಥಾಪನೆ, ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಸಹಸ್ರಾರು ಕಾರ್ಮಿಕರ ಹಿತದೃಷ್ಟಿಯಿಂದ ಜಿಲ್ಲೆಗೆ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಅತ್ಯವಶ್ಯಕ ವಾಗಿತ್ತು. ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿಯೂ ಸುಸಜ್ಜಿತ ಇಎಸ್‌ಐ ಆಸ್ಪತ್ರೆಗೆ ಅನುಮೋದನೆ ನೀಡಿಲ್ಲ.
ಬ್ರಾಡ್‌ಬ್ಯಾಂಡ್: ಕೇಂದ್ರ ಬಜೆಟ್‌ನಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು ಹಾಗೂ ತಾಂತ್ರಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ನಿರ್ಧರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸಂಪರ್ಕ ವಿಸ್ತರಿಸುವುದಾಗಿ ಘೋಷಿಸಿರುವುದು ಒಳ್ಳೆಯ ಬೆಳವಣಿಗೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್ ಡೇ ಕೇರ್ ಸೆಂಟರ್‌ಗಳ ಸ್ಥಾಪನೆಗೆ ಒತ್ತು ನೀಡಿರುವುದು ಮತ್ತೊಂದು ಆಶಾದಾಯಕ ಸಂಗತಿ. ಕ್ಯಾನ್ಸರ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಸ್ಥಾಪನೆಯಾದರೆ ರೋಗಿಗಳಿಗೆ ಸಮಯಕ್ಕೆ ಚಿಕಿತ್ಸೆ ದೊರೆಯುತ್ತದೆ. ಆರೋಗ್ಯ ಸ್ಥಿತಿ ಸರಿಯಿಲ್ಲದರುವಾಗ ದೂರದ ನಗರ ಪ್ರದೇಶಕ್ಕೆ ಪ್ರಯಾಣಿಸುವ ಅವಶ್ಯಕತೆ ಇರುವುದಿಲ್ಲ, ಕೇಂದ್ರದ ಈ ಯೋಜನೆ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಮನೆಯವರಿಗೆ ಬಹುದೊಡ್ಡ ಸಹಾಯವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಆದಾಯ ತೆರಿಗೆ ಸ್ಲಾಬ್ ಗಳ ಪರಿಷ್ಕರಣೆ ಹಿಂದೆಯೇ ಆಗಬೇಕಿತ್ತು. ಅದು ಈಗ ಆಗಿದೆ. ನೂತನ ಪರಿಷ್ಕರಣೆ ಜಾರಿಯಾದರೆ, ಜಿಲ್ಲೆಯಲ್ಲಿ ಸುಮಾರು ಶೇಕಡ 40ರಷ್ಟು ಸರ್ಕಾರಿ ನೌಕರರಿಗೆ ಅನುಕೂಲ ಆಗಲಿದೆ.
- ಕೆ.ಸತೀಶ್ , ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ, ರಾಮನಗರ.
ಈ ಬಜೆಟ್ ಆರ್ಥಿಕ ಸ್ಥಿರತೆ, ಉದ್ಯೋಗ ಸೃಷ್ಟಿ, ಮತ್ತು ದೀರ್ಘಕಾಲಿಕ ವಿಕಸನಕ್ಕೆ ಸಹಾಯ ಮಾಡಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೊರಕುವ ಬೆಂಬಲ ಹೊಸ ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಿದೆ. ಬಜೆಟ್‌ನಲ್ಲಿ ಘೋಷಿತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವೇ, ದೇಶದ ಆರ್ಥಿಕ ವೃದ್ಧಿಗೆ ಇಂಧನವಾಗಿ ಕಾರ್ಯನಿರ್ವಹಿಸಲಿದೆ
- ಕೆ.ಎಸ್.ಪ್ರಶಾಂತ್, ಕಾರ್ಯದರ್ಶಿ, ಜಿಲ್ಲಾ ಚೇಂಬರ್ ಆಫ್ ಕಾರ್ಮಸ್ , ರಾಮನಗರ.
ಕಿಸಾನ್ ಕ್ರೆಡಿಟ್ ಮೊತ್ತವನ್ನು 3 ರಿಂದ 5 ಲಕ್ಷಕ್ಕೆ ಏರಿಸಿರುವುದು ಸ್ವಾಗತ. ಆದರೆ ಕಿಸಾನ್ ಕ್ರೆಡಿಟ್ ಕಾರ್ಡು ಎಷ್ಟು ಮಂದಿ ರೈತರಿಗೆ ತಲುಪಿದೆ ಎಂದು ಪ್ರಶ್ನಿಸಿದ್ದಾರೆ. ಕೃಷಿ ಉತ್ಪಾದನೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡದ ಹೊರತು ಯುವ ಸಮುದಾಯವನ್ನು ಕೃಷಿ ಚಟುವಟಿಕೆಗಳಿಗೆ ಸೆಳೆಯಲು ಸಾಧ್ಯವಿಲ್ಲ. ಹೀಗಾಗಿ ಈ ಬಜೆಟ್ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಲಿದೆ
- ಚೀಲೂರು ಮುನಿರಾಜು, ರಾಜ್ಯ ಸಂಚಾಲಕರು, ಕರ್ನಾಟಕ ರಾಜ್ಯ ರೈತ ಸಂಘ.
ರಾಜ್ಯಕ್ಕೆ ಮತ್ತೊಂದು ಐಐಟಿ ಮಂಜೂರಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸುವ ಉದ್ದೇಶ ಸ್ವಾಗತಾರ್ಹ. ಆದರೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಿಲ್ಲ. ಈ ಆಯವ್ಯಯ ನಿರಾಶೆ ತಂದಿದೆ
.- ಕುಮಾರಸ್ವಾಮಿ, ರಾಜ್ಯ ಸಲಹೆಗಾರ, ಜಯಕರ್ನಾಟಕ ಜನಪರ ವೇದಿಕೆ.
ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಮಂಡಿಸಿರುವ 2025ರ ಬಜೆಟ್ ಶ್ರೀಮಂತರು ಮತ್ತು ದಲ್ಲಾಳಿಗಳ ಪರವಾಗಿದೆ. ಬಡವರು ಮತ್ತು ಗ್ರಾಮೀಣ ಜನರನ್ನು ಮಹಿಳೆಯರನ್ನು ವಿದ್ಯಾರ್ಥಿ ಸಮುದಾಯಗಳನ್ನು ಒಳಗೊಳ್ಳುವ ಬಜೆಟ್ ಆಗಿಲ್ಲ. ಇದು ಬಂಡವಾಳ ಶಾಹಿಗಳನ್ನು ಮೆಚ್ಚಿಸಲು ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಮಂಡಿಸಿರುವ ಬಜೆಟ್ ಆಗಿದೆ.
- ಮಲ್ಲಿಕಾರ್ಜುನ್ , ಅಧ್ಯಕ್ಷರು ,ಧಮ್ಮ ದೀವಿಗೆ ಟ್ರಸ್ಟ್