ಬಜೆಟ್ ಗಾತ್ರ ಈಗ ₹46 ಸಾವಿರ ಕೋಟಿ ಹೆಚ್ಚಾಗಿದೆ: ಸಿದ್ದರಾಮಯ್ಯ

| Published : Feb 19 2024, 01:31 AM IST / Updated: Feb 19 2024, 02:34 PM IST

ಸಾರಾಂಶ

ನಾವು 5 ಗ್ಯಾರಂಟಿ ಘೋಷಣೆ ಮಾಡಿದಾಗ ಜಾರಿ ಮಾಡಲು ಸಾಧ್ಯವಿಲ್ಲ, ಹಣಕಾಸಿನ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ವಿಪಕ್ಷದವರು ಟೀಕೆ ಮಾಡಿದ್ದರು. ಬಜೆಟ್ ಗಾತ್ರ ಈಗ ₹46 ಸಾವಿರ ಕೋಟಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ನಾವು 5 ಗ್ಯಾರಂಟಿ ಘೋಷಣೆ ಮಾಡಿದಾಗ ಜಾರಿ ಮಾಡಲು ಸಾಧ್ಯವಿಲ್ಲ, ಹಣಕಾಸಿನ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ವಿಪಕ್ಷದವರು ಟೀಕೆ ಮಾಡಿದ್ದರು. ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಬಜೆಟ್ ಗಾತ್ರ ಈಗ ₹46 ಸಾವಿರ ಕೋಟಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಕೆಎಲ್‌ಇ ಸ್ಕೂಲ್ ಪಕ್ಕದ ಮೈದಾನದಲ್ಲಿ ವಿವಿಧ ಇಲಾಖೆಗಳ ಅನುದಾನದಡಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ₹411.60 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಬಜೆಟ್‌ನಿಂದ ಬಜೆಟ್ ಗಾತ್ರ ಹೆಚ್ಚಾಗಬೇಕಾದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಲು ಸಾಧ್ಯವೇ? ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ತಕ್ಕ ಪಾಠವನ್ನು ನೀವೇ ಕಲಿಸಬೇಕು ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ರಾಜ್ಯದ 7 ಕೋಟಿ ಜನರಲ್ಲಿ 5 ಕೋಟಿ ಜನರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಬಜೆಟ್‌ನಲ್ಲಿ ಬಡತನದಿಂದ ನರಳುವ ಜನರು ಮಧ್ಯಮ ವರ್ಗಕ್ಕೆ ಬರಬೇಕು ಎಂಬುದು ನಮ್ಮ ಕಳಕಳಿ. ಬಿಜೆಪಿಯವರ ಕಳಕಳಿ ಕೋಮುವಾದ, ಜಾತಿ ಜನರನ್ನು ಮತ್ತೊಂದು ಜಾತಿಗೆ ಎತ್ತಿ ಕಟ್ಟುವುದು, ಬಿಜೆಪಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಬಾಯಿ ಮಾತಿಗೆ ಸೀಮಿತವಾಗಿದೆ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಅನ್ಯಾಯ: ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ತೆರಿಗೆ ಕಟ್ಟುವಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದ್ದೇವೆ. ₹4.30 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. ನಾವು ಕೊಡುವುದನ್ನು ನಮಗೆ ನ್ಯಾಯಯುತವಾಗಿ ಕೊಡಿ ಎಂದು ಕೇಳುತ್ತಿದ್ದೇವೆ. 

₹100 ಕೊಟ್ಟರೆ ನಮಗೆ ಕೇವಲ ₹13 ಮಾತ್ರ ವಾಪಸ್ ಬರುತ್ತಿದೆ. ಈ ಅನ್ಯಾಯವನ್ನು ಕೇಳಬೇಕಾ ಬೇಡವಾ? ಕೇಳಿದರೆ ಬಿಜೆಪಿಯವರು ಮೈ ಪರಚಿಕೊಳ್ಳುತ್ತಾರೆ ಎಂದು ಕುಟುಕಿದರು.

ಕರ್ನಾಟಕ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ರಿ. ಸಂಸದ ಶಿವಕುಮಾರ ಉದಾಸಿ ಅವರನ್ನು ಕೇಳಿ. ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಕೇಳಿ. ಯಾವತ್ತಾದರೂ ಬಾಯಿ ಬಿಟ್ಟಿದ್ದಾರಾ ಎಂದು ಹರಿಹಾಯ್ದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 15ನೇ ಹಣಕಾಸು ಆಯೋಗದ ವರದಿಯಿಂದ ಅನ್ಯಾಯವಾಗಿದೆ ಎಂದಿದ್ದೆ. ₹5,495 ಕೋಟಿ ಕೊಡಬೇಕು ಎಂದು ಶಿಫಾರಸು ಮಾಡಿದ್ದಾರೆ. 

ಅಂತಿಮ ವರದಿಯಲ್ಲಿ ₹3 ಸಾವಿರ ಕೋಟಿ ಫೆರಿಪೆರಲ್ ರಿಂಗ್ ರೋಡ್‌ಗೆ, ₹3 ಸಾವಿರ ಕೋಟಿ ಕೆರೆ ಅಭಿವೃದ್ಧಿಗೆ ಕೊಡುತ್ತೇವೆ ಎಂದರು. ಒಟ್ಟು ₹11,495 ಕೋಟಿ ಕೇಂದ್ರದಿಂದ ಕೇಳಪ್ಪ ಎಂದೆ. ಆದರೂ ಕೇಳಲಿಲ್ಲ, ಅವರಿಗೆ ಧಮ್ಮ, ತಾಕತ್ತು ಎರಡೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಕೇಂದ್ರವನ್ನು ಕೇಳಲು ಬಿಜೆಪಿ ನಾಯಕರಿಗೆ ಧಮ್ಮು ಇಲ್ಲ. ಕೋಲೆ ಬಸವನ ರೀತಿ ತಲೆ ಆಡಿಸುತ್ತಾರೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 

ರಾಜ್ಯಕ್ಕೆ ಕೊಡಬೇಕಾದ ಅನುದಾನ ಕೊಡಲು ನಿರಾಕರಿಸಿದರು. ಯಾಕಮ್ಮ ಸುಳ್ಳು ಹೇಳುತ್ತೀಯಾ ನಿರ್ಮಲಾ? ಎಂದ ಸಿಎಂ, ಇದು ಕನ್ನಡಿಗರಿಗೆ ಮಾಡುವ ದ್ರೋಹವಲ್ಲವಾ? 25 ಸಂಸದರು ಮೋದಿ ಮತ್ತು ನಿರ್ಮಲಾ ಮನೆ ಮುಂದೆ ಧರಣಿ ಕುಳಿತಿದ್ದರೆ ನ್ಯಾಯ ಸಿಗುತ್ತಿತ್ತು ಎಂದರು.

155 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಧರ್ಮಸ್ಥಳದ ಆದಾಯ ಜಾಸ್ತಿಯಾಗಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಗ್ಯಾರಂಟಿ ಕೊಟ್ಟ ಮೇಲೆ ರಾಜ್ಯದ ಆದಾಯ ಜಾಸ್ತಿಯಾಗಿದೆ. 

ಜಿಎಸ್‌ಟಿ ಬೆಳವಣಿಗೆ ಶೇ. 18ರಷ್ಟಾಗಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ಜನರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದೇವೆ. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. 

ಬಡತನ ನಿವಾರಣೆ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ನಾವು ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬುದನ್ನು ನಿಜ ಅರ್ಥದಲ್ಲಿ ಜಾರಿಗೊಳಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಗೃಹ ಸಚಿವ ಡಾ. ಜಿ. ಪರಮೇಶ್ವರ, ಕಾನೂನು ಸಚಿವ ಎಚ್.ಕೆ. ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, 

ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣವರ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಮಾಜಿ ಸಂಸದರಾದ ಪ್ರೊ. ಐ.ಜಿ. ಸನದಿ, ಮಂಜುನಾಥ ಕುನ್ನೂರ, ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ಎಂ.ಎಂ. ಹಿರೇಮಠ ಇತರರಿದ್ದರು. ಡಿಸಿ ರಘುನಂದನ್‌ ಮೂರ್ತಿ ಸ್ವಾಗತಿಸಿದರು. ಜಿಪಂ ಸಿಇಒ ಅಕ್ಷಯ್‌ ಶ್ರೀಧರ ವಂದಿಸಿದರು.

ಅನ್ಯಾಯ ಸರಿಪಡಿಸುತ್ತೇವೆ: ಈ ಬಾಯಿ ಇಲ್ಲದವರಿಗೆ ಮತ್ತೆ ಲೋಕಸಭೆ ಚುನಾವಣೆಗೆ ಕಳುಹಿಸಬಾರದು ಎಂದು ಪ್ರಾರ್ಥನೆ ಮಾಡುತ್ತೇನೆ. ಯಾವ ಪುರುಷಾರ್ಥಕ್ಕೆ ಅವರು ಹೋಗಬೇಕು. 

ನ್ಯಾಯ ಕೇಳಲು ಧೈರ್ಯ ಇಲ್ಲದವರು ಲೋಕಸಭೆ ಚುನಾವಣೆಗೆ ಹೋಗಬಾರದು. ನಾವು ತೆರಿಗೆ ಕಟ್ಟಿದ ಹಣದಲ್ಲಿ ಶೇ. 50ರಷ್ಟು ಪಾಲನ್ನು ನಮಗೆ ಕೊಡಬೇಕು ಎಂದು ಕೇಳುತ್ತೇವೆ. ಇದಕ್ಕೆ ನೀವು ನಮಗೆ ಶಕ್ತಿ ಕೊಡಬೇಕು. ಆಗ ಕೇಂದ್ರದಿಂದ ಆದ ಅನ್ಯಾಯ ಸರಿಪಡಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.