ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹೊಸ ಪ್ರವಾಸಿ ಮಂದಿರದ ಆವರಣದ ಹಳೇಕಟ್ಟಡವನ್ನು ನೆಲಸಮಗೊಳಿಸಿ ಹೈಟೆಕ್ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣ ಸಂಬಂಧ ವಾಸ್ತುಶಿಲ್ಪ ತಜ್ಞರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಕಟ್ಟಡ ನಿರ್ಮಾಣಕ್ಕೆ ಅಂದಾಜು ವೆಚ್ಚ, ನೀಲನಕ್ಷೆ ತಯಾರಿಸುವ ಸಂಬಂಧ ಚರ್ಚೆ ನಡೆಸಿದರು.
ಹಾಲಿ ಪ್ರವಾಸಿ ಮಂದಿರದ ಆವರಣದಲ್ಲಿರುವ ಹಳೆ ಕಟ್ಟಡ ಬ್ರಿಟಿಷರ ಕಾಲದ ಕಟ್ಟಡವಾಗಿದೆ. ಅದನ್ನು ತೆರವುಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಜೊತೆಗೆ ಕಟ್ಟಡದಲ್ಲಿ ಕನಿಷ್ಠ 10 ಕೊಠಡಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು.ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಿರ್ಮಾಣವಾಗಿರುವ ಪ್ರವಾಸಿ ಮಂದಿರ ಕಟ್ಟಡಕ್ಕೂ ಹೈಟೆಕ್ ಸ್ಪರ್ಶ ನೀಡುವುದರ ಜೊತೆಗೆ ಆ ಕಟ್ಟಡದಲ್ಲೂ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದರು.
ಹಾಲಿ ಇರುವ ಪ್ರವಾಸಿ ಮಂದಿರದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಗೆ ಮಾರ್ಗ ಮಧ್ಯ ಇರುವುದರಿಂದ ಪ್ರತಿನಿತ್ಯ ಹಲವು ಗಣ್ಯ ವ್ಯಕ್ತಿಗಳು ಇಲ್ಲಿಗೆ ಬಂದು ಕೆಲಕಾಲ ವಿಶ್ರಾಂತಿ ಪಡೆದು ಹೋಗುತ್ತಾರೆ. ಇವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.ಕಟ್ಟಡ ನಿರ್ಮಾಣ ಸಂಬಂಧ ತಾವು ಸಂಬಂಧ ಪಟ್ಟ ಸಚಿವರು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮುಖ್ಯ ವಾಸ್ತುಶಿಲ್ಪಿ ರಾಮಸ್ವಾಮಿ, ಶ್ರೀಧರ್, ಲೋಕೋಪಯೋಗಿ ಇಲಾಖೆ ಇಇ ಹರ್ಷ, ಉಪ ವಾಸ್ತುಶಿಲ್ಪಿ ರಾಜೇಶ್ವರಿ, ಮದ್ದೂರು ಲೋಕೋಪಯೋಗಿ ಇಲಾಖೆಯ ಎಇಇ ದೇವಾನಂದ ಇದ್ದರು.ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಇಂದು ಪ್ರತಿಭಟನೆಮದ್ದೂರು:ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಧಾರ್ಮಿಕ ಕೇಂದ್ರಗಳ ಧ್ವಂಸ ಹಾಗು ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಮತಾಂದ ಮುಸ್ಲಿಮರ ದೌರ್ಜನ್ಯ ಖಂಡಿಸಿ ಆ.12ರಂದು ಬೆಳಗ್ಗೆ ಪಟ್ಟಮ ಪ್ರವಾಸಿ ಮಂದಿರದ ವೃತ್ತದಲ್ಲಿ ಎಲ್ಲಾ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂಪರ ಸಂಘಟನೆ ಮುಖಂಡ ಸಿಪಾಯಿ ಶ್ರೀನಿವಾಸ್ ತಿಳಿಸಿದ್ದಾರೆ.