ಬಾಳೆಹೊನ್ನೂರು ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ 17ನೆ ವರ್ಷದ ನವರಾತ್ರಿ ಪೂಜಾ ಮಹೋತ್ಸವದ ಅನ್ನ ಸಂತರ್ಪಣೆಗೆ ಭಕ್ತರಿಂದ ಅಪಾರ ಸಹಕಾರ ದೊರೆತು ಹೆಚ್ಚಿನ ಹೊರೆ ಕಾಣಿಕೆ ಸಮರ್ಪಣೆಯಾಗುತ್ತಿದೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ 17ನೆ ವರ್ಷದ ನವರಾತ್ರಿ ಪೂಜಾ ಮಹೋತ್ಸವದ ಅನ್ನ ಸಂತರ್ಪಣೆಗೆ ಭಕ್ತರಿಂದ ಅಪಾರ ಸಹಕಾರ ದೊರೆತು ಹೆಚ್ಚಿನ ಹೊರೆ ಕಾಣಿಕೆ ಸಮರ್ಪಣೆಯಾಗುತ್ತಿದೆ.ಮಹೋತ್ಸವದಲ್ಲಿ ಕಳೆದ 15ವರ್ಷಗಳಿಂದ ನಿತ್ಯ ಮಧ್ಯಾಹ್ನ ಅನ್ನ ಪ್ರಸಾದ ಸಂತರ್ಪಣೆಯಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಉತ್ಸವದ 10ದಿನಗಳು ಪ್ರತಿನಿತ್ಯ ಮಧ್ಯಾಹ್ನ 2000ಕ್ಕೂ ಅಧಿಕ ಭಕ್ತರಿಗೆ ದುರ್ಗಾದೇವಿ ನವರಾತ್ರಿ ಸಮಿತಿ ಅಚ್ಚುಕಟ್ಟಾಗಿ ಅನ್ನ ಪ್ರಸಾದ ಉಣ ಬಡಿಸುತ್ತಿದೆ.
ಸಮಿತಿ ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸುಂದರ್ ಇಟ್ಟಿಗೆ ಸೇರಿದಂತೆ ಪ್ರಮುಖರ ನೇತೃತ್ವದ ಅನ್ನ ಸಂತರ್ಪಣಾ ಸಮಿತಿ ಪ್ರತಿನಿತ್ಯ ಭಕ್ತರಿಗೆ ಅನ್ನ, ಸಾಂಬಾರ್, ಪಾಯಸ, ಪುಳಿಯೋಗರೆ, ಮಜ್ಜಿಗೆ, ಸೇರಿದಂತೆ ವಿಶೇಷ ದಿನಗಳಲ್ಲಿ ಹಣ್ಣಿನ ರಸಾಯನ, ಹೋಳಿಗೆ, ಬೂಂದಿ, ಜಿಲೇಬಿ, ಲಾಡು, ಪಲ್ಯ ವನ್ನು ನೀಡಿ ಬಂದ ಭಕ್ತರಿಗೆ ಸಂತುಷ್ಟಿಗೊಳಿಸುತ್ತಾರೆ.ಭಕ್ತರ ಸಂಖ್ಯೆ ಹೆಚ್ಚಿದಂತೆ ಈ ಕಾರ್ಯಕ್ಕೆ ಕೈ ಜೋಡಿಸಲು ಹಲವರು ಮುಂದಾಗಿದ್ದಾರೆ. ನಿತ್ಯ ಒಬ್ಬೊಬ್ಬ ಸೇವಾರ್ಥದಾರರು ವಿಶೇಷವಾಗಿ ಗ್ರಾಮೀಣ ಭಾಗದ ರೈತರು, ಜನ ಸಾಮಾನ್ಯರು ತಾವು ಮನೆಗಳಲ್ಲಿ ಬೆಳೆದ ಅಕ್ಕಿ, ತೆಂಗಿನಕಾಯಿ, ವಿವಿಧ ತರಕಾರಿಗಳನ್ನು ಸಂತಸದಿಂದ ತಂದು ಹೊರೆ ಕಾಣಿಕೆಯಾಗಿ ನೀಡುತ್ತಿದ್ದಾರೆ.
ವಿಜಯದಶಮಿಯಂದು 15 ಸಾವಿರಕ್ಕೂ ಅಧಿಕ ಭಕ್ತರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಸಹ ಯಾವುದೇ ಗೊಂದಲವಾಗದಂತೆ ಸಮಿತಿ ಸದಸ್ಯರು ಅಚ್ಚುಕಟ್ಟಾಗಿ ಅನ್ನ ಪ್ರಸಾದ ವಿತರಣೆ ಕಾರ್ಯ ನಡೆಸುತ್ತಿದ್ದಾರೆ. ಅನ್ನ ಸಂತರ್ಪಣೆಯಲ್ಲಿ ಹಲವು ಸ್ವಯಂ ಸೇವಕರು ಸಹ ನಿತ್ಯವೂ ಸ್ವಇಚ್ಛೆಯಿಂದ ಪಾಲ್ಗೊಂಡು ಅನ್ನ ಪ್ರಸಾದ ಬಡಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿಶೇಷ ಸೇವೆ ಭಕ್ತರಿಂದ ಶ್ಲಾಘನೆಗೆ ಒಳಗಾಗಿದೆ.(ಬಾಕ್ಸ್)
ಇಂದು ದುರ್ಗಾ ಪೂಜಾ ಪಾರಾಯಣಬಾಳೆಹೊನ್ನೂರು: ಅ.18ರ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1ರವರೆಗೆ ಅಶ್ವರೋಹಿಣಿ ದುರ್ಗಾ ಪೂಜಾ ಪಾರಾಯಣ, ಶ್ರೀ ದುರ್ಗಾಷ್ಟಮಿ ಅಂಗವಾಗಿ ದುರ್ಗಾದೇವಿ ವಿಶೇಷ ಹೂವಿನ ಪೂಜೆ ನಡೆಯಲಿದೆ.ಮಧ್ಯಾಹ್ನ 1.30ರಿಂದ ಕೆ.ಎಂ.ರಾಘವೇಂದ್ರ ಕುಂಬರಗೋಡು ಅವರಿಂದ ಮಂಕುತಿಮ್ಮನ ಕಗ್ಗ ಆಧಾರಿತ ಮಾತು-ಮಂಥನ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯ ಲಿದೆ. ರಾತ್ರಿ ೮ರಿಂದ ಕುಡ್ಲದ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ಆಂಟಿ ಬೊಕ್ಕ ಅಂಕಲ್ ಎಂಬ ಹಾಸ್ಯಮಯ ತುಳು ನಾಟಕ ನಡೆಯಲಿದೆ.೧೭ಬಿಹೆಚ್ಆರ್ ೧:ಬಾಳೆಹೊನ್ನೂರಿನ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ನವರಾತ್ರಿ ಮಹೋತ್ಸವದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿರುವ ಭಕ್ತರು.