ಅತ್ಯಲ್ಪ ಹಾಗೂ ಅನಿಶ್ಚಿತವಾಗಿರುವ ಮಾನವ ಜೀವನದಲ್ಲಿ ಪ್ರತಿಯೊಬ್ಬರೂ ಧರ್ಮಾಧಾರಿತವಾದ ಜೀವನ ನಡೆಸಬೇಕೆಂದು ಸೋಸಲೆ ಶ್ರೀ ವ್ಯಾಸರಾಜಮಠದ ಪೀಠಾಧಿಪತಿಗಳಾದ ವಿದ್ಯಾವಿಜಯತೀರ್ಥ ಶ್ರೀಪಾದಂಗಳು ಆಶಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುಅತ್ಯಲ್ಪ ಹಾಗೂ ಅನಿಶ್ಚಿತವಾಗಿರುವ ಮಾನವ ಜೀವನದಲ್ಲಿ ಪ್ರತಿಯೊಬ್ಬರೂ ಧರ್ಮಾಧಾರಿತವಾದ ಜೀವನ ನಡೆಸಬೇಕೆಂದು ಸೋಸಲೆ ಶ್ರೀ ವ್ಯಾಸರಾಜಮಠದ ಪೀಠಾಧಿಪತಿಗಳಾದ ವಿದ್ಯಾವಿಜಯತೀರ್ಥ ಶ್ರೀಪಾದಂಗಳು ಆಶಿಸಿದರು.ಅವರು ತುಮಕೂರು ತಾಲೂಕು ದೇವರಾಯದುರ್ಗದಲ್ಲಿ ಶ್ರೀಪ್ರಹ್ಲಾದರಾಜ ಸೇವಾಟ್ರಸ್ಟ್ ವತಿಯಿಂದ ನಡೆದ ಪ್ರಹ್ಲಾದ-ವ್ಯಾಸರಾಜ- ರಾಘವೇಂದ್ರಸ್ವಾಮಿಗಳ ಮಠದ 18 ನೇ ವಾರ್ಷಿಕೋತ್ಸವ ಹಾಗೂ ನವೀಕೃತ ವೇದವ್ಯಾಸ ಗೋಶಾಲೆಯ ಉದ್ಘಾಟನಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ದೈನಂದಿನ ಪೂಜಾದಿಗಳು, ಮಂತ್ರಪಠಣೆ, ಪ್ರಾರ್ಥನೆ, ಭಜನೆಗಳು ಮನಸ್ಸಿನ ಮೇಲೆ ಅಗಾಧವಾದ ಸತ್ಪರಿಣಾಮವನ್ನುಂಟು ಮಾಡುತ್ತವೆ ಹಾಗೂ ಜೀವನದಲ್ಲಿ ನೆಮ್ಮದಿ, ಶಾಂತಿಗೆ ಕಾರಣವಾಗುತ್ತವೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.ಕೋಲಾರದ ಮುಳಬಾಗಿಲಿನ ಶ್ರೀಪಾದರಾಜ ಮಠದ ಪೀಠಾಧಿಪತಿಗಳಾದ ಶ್ರೀ ಸುಜಯನಿಧಿತೀರ್ಥ ಶ್ರೀಪಾದಂಗಳು ಮತ್ತು ತಂಬಿಹಳ್ಳಿ ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದಂಗಳು ದಿವ್ಯ ಸಾನಿಧ್ಯ ವಹಿಸಿ ನವೀಕೃತ ವೇದವ್ಯಾಸ ಗೋಶಾಲೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರೂ ಹಾಗೂ ಶ್ರೀ ಪ್ರಹ್ಲಾದರಾಜ ಸೇವಾಟ್ರಸ್ಟ್ ಅಧ್ಯಕ್ಷರಾದ ಎಚ್.ಕೆ.ಸತ್ಯನಾರಾಯಣ ಅವರನ್ನು ಶ್ರೀಪಾದಂಗಳು ಶಾಲು ಹೊದಿಸಿ ಸನ್ಮಾನಿಸಿದರು. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗಿನಿಂದ ಸಂಜೆಯವರೆಗೆ ಪುಣ್ಯಾಹ, ನವಗ್ರಹಪೂಜೆ, ಸಂಸ್ಥಾನಪೂಜೆ, ಶ್ರೀನಿವಾಸ ಕಲ್ಯಾಣ ಉಪನ್ಯಾಸ, ಶ್ರೀ ನರಸಿಂಹಸ್ವಾಮಿ ಕಲ್ಯಾಣೋತ್ಸವ, ವೃಂದಾವನ ಹಾಗೂ ಪ್ರತಿಮೆಗಳಿಗೆ ಶ್ರೀಪಾದಂಗಳವರಿಂದ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸಂಸ್ಥಾನಪೂಜೆ, ಶ್ರೀನಿವಾಸದೇವರ ಕಲ್ಯಾಣೋತ್ಸವ, ಶ್ರೀಲಕ್ಷ್ಮೀನರಸಿಂಹ ದೇವರ ಮಂಟಪ ಪಡಿ ಉತ್ಸವ ಹಾಗೂ ವಿವಿಧ ಪೂಜಾದಿಗಳು ನಿರಂತರವಾಗಿ ನೆರವೇರಿದವು.