ಸಾರಾಂಶ
ಸನಾತನ ಧರ್ಮದ ಮೂಲವಾದ ಗೋವನ್ನು ನಾವು ಮರೆಯುತ್ತಿದ್ದೇವೆ. ಗೋವು ಉಳಿಸುವ ಅಭಿಯಾನ ಜನರಿಂದಲೇ ನಡೆಯಬೇಕು. ಬೆಂಗಳೂರಿನಲ್ಲಿ ಗನ್ ಹಿಡಿದು ಗೋ ಶಾಲೆ ನಡೆಸುವ ಪರಿಸ್ಥಿತಿ ಇದೆ.
ಕುಮಟಾ:
ಸನಾತನ ಧರ್ಮದ ಮೂಲವಾದ ಗೋವನ್ನು ನಾವು ಮರೆಯುತ್ತಿದ್ದೇವೆ. ಗೋವು ಉಳಿಸುವ ಅಭಿಯಾನ ಜನರಿಂದಲೇ ನಡೆಯಬೇಕು. ಬೆಂಗಳೂರಿನಲ್ಲಿ ಗನ್ ಹಿಡಿದು ಗೋ ಶಾಲೆ ನಡೆಸುವ ಪರಿಸ್ಥಿತಿ ಇದೆ. ಗೋಧಾಮಗಳಿಗೆ ಸರ್ಕಾರ ಕೊಟ್ಟಿದ್ದೇನು ಎಂದು ಖ್ಯಾತ ಪತ್ರಕರ್ತ ಬಿ. ಗಣಪತಿ ಪ್ರಶ್ನಿಸಿದರು.ತಾಲೂಕಿನ ಹೊಸಾಡ ಅಮೃತಧಾರಾ ಗೋಶಾಲೆಯಲ್ಲಿ ಗೋ ಸಂಧ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಗೋವಿನ ಸಾಕಾಣಿಕೆಯಲ್ಲಿ ಭಾವನಾತ್ಮಕ ಹಾಗೂ ವ್ಯಾವಹಾರಿಕ ನೆಲೆಗಳಿವೆ. ಹೊಸಾಡದ ಅಮೃತಧಾರಾ ಗೋ ಶಾಲೆ ಭಾವನಾತ್ಮಕ ನೆಲೆಯನ್ನೇ ಆಧಾರವಾಗಿಟ್ಟುಕೊಂಡು ನಡೆಯುತ್ತಿದೆ. ವರ್ಷಕ್ಕೊಮ್ಮೆ ಗೋಶಾಲೆಗೆ ಬಂದು ಆನಂದಿಸಿ ಹೋಗುವುದಷ್ಟೇ ಅಲ್ಲ, ಗೋವಿಗಾಗಿ ನಾವೇನು ಮಾಡಿದ್ದೇವೆ ಎಂಬುದನ್ನು ಚಿಂತಿಸಬೇಕು. ಗೋಶಾಲೆಯ ರಕ್ಷಣೆಗೆ ಪಣ ತೊಡಬೇಕು. ಹಿಂದೂ ಧರ್ಮದ ಮೂಲ ಲಕ್ಷಣವೇ ಗೋ ಸಾಕಾಣಿಕೆಯಲ್ಲಿದೆ ಎಂದರು.ಗೋಶಾಲೆಯ ಅಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಗೋ ಶಾಲೆಯನ್ನು ಸ್ವಾವಲಂಬಿಯಾಗಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳಿಗೆ ನೈಜ ಗೋವಿನ ಕಲ್ಪನೆ ನೀಡಬೇಕು. ಗೋ ಶಾಲೆಯ ಜತೆಗೆ ಮಕ್ಕಳನ್ನು ಜೋಡಿಸಬೇಕಿದೆ ಎಂದರು.
ಉದ್ಯಮಿ ವಿದ್ಯಾಧರ ಹೆಗಡೆ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ವಿ.ಎಸ್. ಹೆಗಡೆ, ಗೋ ಶಾಲೆಯ ಖಜಾಂಚಿ ಜಿ.ಎಸ್. ಹೆಗಡೆ, ಉಪಾಧ್ಯಕ್ಷ ಸುಬ್ರಾಯ ಭಟ್ಟ ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಆರ್.ಜಿ ಉಗ್ರು ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಭಟ್ಟ ಸುವರ್ಣಗದ್ದೆ ಸ್ವಾಗತಿಸಿದರು. ಗೋ ಸಂಧ್ಯಾ ಸಮಿತಿ ಅಧ್ಯಕ್ಷ ಆರ್.ಜಿ. ಭಟ್ಟ ವಂದಿಸಿದರು. ಅರುಣ ಹೆಗಡೆ ನಿರೂಪಿಸಿದರು. ಗೋ ಶಾಲೆಯ ಪರಿಸರದಲ್ಲಿ ಆಲೆಮನೆ ಹಬ್ಬದ ಜತೆಗೆ ಸನ್ಮಾನ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು