ಟೋಲ್‌ ಕಟ್ಟದೆ ಕಾರು ನುಗ್ಗಿಸಿ ಪರಾರಿ...!

| Published : Oct 11 2023, 12:47 AM IST

ಸಾರಾಂಶ

ಶ್ರೀರಂಗಪಟ್ಟಣದ ಗಣಂಗೂರು ಟೋಲ್‌ ಪ್ಲಾಜಾ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇನಲ್ಲಿ ಬಂದ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಟೋಲ್‌ ಕಟ್ಟದೆ ದರ್ಪ ಪ್ರದರ್ಶಿಸಿದ್ದಲ್ಲದೆ, ತಡೆಗೋಡೆಯನ್ನು ಲೆಕ್ಕಿಸದೆ ಕಾರು ನುಗ್ಗಿಸಿಕೊಂಡು ಪರಾರಿಯಾಗಿದ್ದಾರೆ.
ಮಂಡ್ಯ: ಶ್ರೀರಂಗಪಟ್ಟಣದ ಗಣಂಗೂರು ಟೋಲ್‌ ಪ್ಲಾಜಾ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇನಲ್ಲಿ ಬಂದ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಟೋಲ್‌ ಕಟ್ಟದೆ ದರ್ಪ ಪ್ರದರ್ಶಿಸಿದ್ದಲ್ಲದೆ, ತಡೆಗೋಡೆಯನ್ನು ಲೆಕ್ಕಿಸದೆ ಕಾರು ನುಗ್ಗಿಸಿಕೊಂಡು ಪರಾರಿಯಾಗಿರುವ ಘಟನೆ ಟೋಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂರು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯ ಕಡೆಯಿಂದ ಮೈಸೂರಿನತ್ತ ಎಕ್ಸ್ ಪ್ರೆಸ್ ವೇನಲ್ಲಿ ಸಂಚರಿಸುತ್ತಿದ್ದ ಅಂಬೇಡ್ಕರ್‌ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ದರ್ಪ ಮೆರೆದ ವ್ಯಕ್ತಿಯಾಗಿದ್ದಾನೆ. ಫಾರ್ಚೂನರ್‌ ಕಾರಿನಲ್ಲಿ ಪಿ.ಮೂರ್ತಿ ಟೋಲ್‌ ಪ್ಲಾಜಾ ಬಳಿ ಬಂದಾಗ ಟೋಲ್‌ ಶುಲ್ಕ ಕಟ್ಟುವಂತೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಿ.ಮೂರ್ತಿ ಟೋಲ್ ಸಿಬ್ಬಂದಿಯೊಂದಿಗೆ ತಗಾದೆ ತೆಗೆದು, ನಾನು ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ. ನನ್ನ‌ ಬಳಿಯೇ ಟೋಲ್ ಶುಲ್ಕ ಕೇಳ್ತೀಯಾ ಎಂದು ಧಮಕಿ ಹಾಕಿದನು ಎನ್ನಲಾಗಿದೆ. ಟೋಲ್ ಶುಲ್ಕ ಕಟ್ಟದೇ ಕಾರು ಬಿಡಲು ಸಾಧ್ಯವಿಲ್ಲವೆಂದು ಸಿಬ್ಬಂದಿ ಹೇಳಿದಾಗ, ಸಿಟ್ಟಿಗೆದ್ದ ಮೂರ್ತಿ ತನ್ನ ಕಾರನ್ನು ರಿವರ್ಸ್ ತೆಗೆದು ಪಕ್ಕದ ಪಥಕ್ಕೆ ಚಲಿಸಿದ್ದಾನೆ. ತಡೆ ಕಂಬಿ ಹಾಕಿದ್ದರೂ ಕಾರು ನುಗ್ಗಿಸಿಕೊಂಡು ಪರಾರಿಯಾಗಿದ್ದಾನೆ. ಈ ಸಮಯದಲ್ಲಿ ಕಾರನ್ನು ತಡೆಯಲು ಹೋದ ಟೋಲ್ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದು ಮೂರು ದಿನಗಳಾದರೂ ಪಿ.ಮೂರ್ತಿ ವಿರುದ್ಧ ದೂರು ದಾಖಲಾಗಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತಂದು ಮಂಗಳವಾರ ದೂರು ಸಲ್ಲಿಕೆಗೆ ಟೋಲ್ ಸಿಬ್ಬಂದಿ ಮುಂದಾಗಿದ್ದರು.