ಸಾರಾಂಶ
ಮಾಧ್ಯಮಗೋಷ್ಠಿ । ಎ.ಟಿ.ರಾಮಸ್ವಾಮಿ ಆಗ್ರಹ । ಅನರ್ಹ ವಿಚಾರದ ಪ್ರಕರಣಕನ್ನಡಪ್ರಭ ವಾರ್ತೆ ಹಾಸನ
ಹಿಂದಿನ ಲೋಕಾಸಭಾ ಚುನಾವಣೆಯ ಸಮಯದಲ್ಲಿ ಹಾಸನ ಜಿಲ್ಲೆಯಿಂದ ಸ್ಪರ್ಧೆ ಮಾಡಿದ ಪ್ರಜ್ವಲ್ ರೇವಣ್ಣ ಸುಳ್ಳು ದಾಖಲೆ ನೀಡಿದ ಹಿನ್ನೆಲೆಯಲ್ಲಿ ಅನರ್ಹದ ವಿಚಾರವಾಗಿ ನಡೆಯುತ್ತಿರುವ ಪ್ರಕರಣವನ್ನು ಕೋರ್ಟ್ ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಆಗ್ರಹಿಸಿದರು.ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ದಿನಾಂಕ ಘೋಷಣೆ ಆಗಲಿದ್ದು, ಅಷ್ಟರೊಳಗೆ ನ್ಯಾಯಾಲಯ ತೀರ್ಪು ನೀಡಿದರೆ ಉತ್ತಮ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು ಕೆಲವು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸದೆ ವಿಳಂಬ ಮಾಡುತ್ತಿವೆ. ಇದರಿಂದ ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗಲು ಕಾರಣವಾಗಿದೆ ಎಂದು ದೂರಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಲೋಕಸಭೆ ಸದಸ್ಯ ಸ್ಥಾನವನ್ನು ಅನರ್ಹಗೊಳಿಸಿ ಆರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ನಂತರ ಸಂಸದ ಪ್ರಜ್ವಲ್ ರೇವಣ್ಣ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದು ಇದೀಗ ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರ ಬಂದಿಲ್ಲ. ಇದರಿಂದ ತ್ವರಿತ ನ್ಯಾಯದಾನ ವಿಳಂಬವಾಗಿದೆ ಎಂದರು.ಸಂಸದ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂ ಕೋರ್ಟ್‌ನಿಂದ ರಾಜ್ಯ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದೀಗ ಅವರು ಬೇಲ್‌ನಲ್ಲಿ ಇದ್ದು, ಅಪರಾಧ ಸಾಬೀತಾಗಿದೆ. ಅವರು ಸಂಸದರಾಗಿ ಯಾವ ರೀತಿಯ ಆಡಳಿತ ನೀಡಬಹುದು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿ ಹಿಡಿತ ಸಾಧಿಸಬಹುದು ಎಂದು ತಿಳಿಯಬಹುದು ಎಂದರು.
ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ವಿಶೇಷ ಪ್ರಕರಣ ಎಂದು ಪರಿಗಣಿಸಿ ತ್ವರಿತಗತಿಯಲ್ಲಿ ತೀರ್ಪು ನೀಡಿದರೆ. ಹೆಚ್ಚು ಅನುಕೂಲವಾಗಲಿದೆ ಸರ್ವೋಚ್ಚ ನ್ಯಾಯಾಲಯ ಮತ್ತಷ್ಟು ತೀರ್ಪು ವಿಳಂಬ ಮಾಡಿದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ ನಂತರ ತೀರ್ಪು ಹೊರಬಿದ್ದರೆ ಮತ್ತೊಮ್ಮೆ ಚುನಾವಣೆ ನಡೆಸಬೇಕಾಗುತ್ತದೆ. ಈ ರೀತಿಯ ಬೆಳವಣಿಗೆಗೆ ನ್ಯಾಯಾಂಗ ವ್ಯವಸ್ಥೆ ಹೊಣೆಯಾಗುತ್ತದೆ. ಮತ್ತೊಮ್ಮೆ ಚುನಾವಣೆ ಮಾಡಿದರೆ ಸಾರ್ವಜನಿಕರ ಕೋಟ್ಯಂತರ ರು. ತೆರಿಗೆ ಹಣ ಪೋಲಾದಂತೆ ಎಂದು ರಾಮಸ್ವಾಮಿ ಹೇಳಿದರು.ವಕೀಲರಾದ ಜನಾರ್ಧನ್ ಗುಪ್ತ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಾದೇಶ್, ಹೇಮಂತ್ ಕುಮಾರ್ ಇತರರು ಉಪಸ್ಥಿತರಿದ್ದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ ಹಾಗೂ ಎಚ್.ಎಂ.ವಿಶ್ವನಾಥ್.