ಸಾರಾಂಶ
ಕನಕಪುರ : ಬೆಳಗಾವಿಯಲ್ಲಿ ಕನ್ನಡ ಮಾತಾಡಿ ಎಂದ ಕಾರಣಕ್ಕೆ ಬಸ್ ನಿರ್ವಾಹಕ ಮಹದೇವ್ ಹುಕ್ಕೇರಿ ಯವರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಮದ್ಯರಾತ್ರಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗೆ ಮಣಿದು ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಿರುವುದು ಕನ್ನಡಿಗರಿಗೆ ಎಸಗಿದ ದ್ರೋಹ ಎಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಕಿಡಿ ಕಾರಿದರು.
ನಗರದಲ್ಲಿ ಈ ಪ್ರಕರಣದ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿಯ ಸಣ್ಣ ಬಾಳೆಕುಂದ್ರಿ ಎಂಬಲ್ಲಿ ಬಸ್ ಟಿಕೆಟ್ ವಿಷಯಕ್ಕೆ ಶುರುವಾದ ಜಗಳದಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ ಕಾರಣಕ್ಕೆ ನಿರ್ವಾಹಕರ ಮೇಲೆ ಯುವಕ- ಯುವತಿಯು ದುಷ್ಕರ್ಮಿಗಳನ್ನು ಕರೆಸಿ ಹಲ್ಲೆ ಮಾಡಿಸಿದ ಪ್ರಕರಣವು ತೀವ್ರ ಸ್ವರೂಪ ಪಡೆದ ನಂತರ ಹಲ್ಲೆ ಮಾಡಿದವರನ್ನು ಬಂಧಿಸಿ ಪೋಲೀಸರು ಕ್ರಮ ಜರುಗಿಸಿದ ನಂತರ ಯಾರದೋ ಒತ್ತಡಕ್ಕೆ ಮಣಿದು ನಿರ್ವಹಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿರುವ ಔಚಿತ್ಯವೇನು ಎಂದು ಪ್ರಶ್ನಿಸಿದರು,
ಪ್ರಕರಣ ನೂರಾರು ಜನರ ಸಮಕ್ಷಮದಲ್ಲೇ ಜರುಗಿದ್ದು ಪ್ರತ್ಯಕ್ಷದರ್ಶಿಗಳು ಎಲ್ಲಿಯೂ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿಲ್ಲದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ಪೋಕ್ಸೋ ಪ್ರಕರಣ ದಾಖಲಿಸಿರುವುದು ಬೇಸರದ ಸಂಗತಿಯಾಗಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ತಮಗೆ ಅವಮಾನ ವಾದಾಗ ಅತ್ತು ಕರೆದು ರಂಪ ಮಾಡಿದ್ದರು, ಆದರೆ ಇಂದು ಕನ್ನಡಿಗರಿಗೆ ಅವಮಾನವಾಗುತ್ತಿದ್ದರೂ ಸಹ ತೆಪ್ಪಗೆ ಕುಳಿತಿರುವುದು ಅವರೊಳಗಿನ ಮರಾಠಿ ಪ್ರೇಮವನ್ನು ಅನಾವರಣ ಮಾಡುತ್ತಿದೆ, ಈ ಪ್ರಕರಣದ ಸತ್ಯಾಸತ್ಯತೆ ಅರಿಯದೆ ಪ್ರತಿಭಟನೆ ನಡೆಸುತ್ತಿರುವ ಶಿವಸೇನೆ ಮತ್ತು ಎಂಇಎಸ್ ನವರು ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಿಗರ ರಕ್ಷಣೆಗೆ ಧಾವಿಸುವ ಮೂಲಕ ಮರಾಠಿ ಪುಂಡರನ್ನು ನಿಯಂತ್ರಿಸದಿದ್ದರೆ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.