ಸಾರಾಂಶ
ಬಳ್ಳಾರಿ: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕುಲಪತಿಗಳಾಗಿದ್ದ ಕೆ.ಎಂ. ಮೇತ್ರಿ ಎಸ್ಟಿ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಹಂಪಿ ಕನ್ನಡ ವಿವಿಗೆ ನೇಮಕವಾದ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿಯ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಕೆ.ಎಂ.ಮೇತ್ರಿ ಮೂಲತಃ ಹಿಂದೂ ಧನಗರ ಜಾತಿಗೆ ಸೇರಿದ್ದು, ಪರಿಶಿಷ್ಟ ಪಂಗಡದ ಗೊಂಡ ಜಾತಿಯ ಸುಳ್ಳು ಪ್ರಮಾಣಪತ್ರ ಪಡೆದು ಹಂಪಿ ಕನ್ನಡ ವಿವಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಪ್ರವಾಚಕ ಹುದ್ದೆಗೆ ನೇಮಕ ಹೊಂದಿದ್ದಾರೆ ಎಂದು ದೂರು ದಾಖಲಾಗಿದೆ. ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರದ ಮೂಲಕ ಅನೇಕ ಸೌಲಭ್ಯಗಳನ್ನು ಪಡೆದು ರಾಜ್ಯ ಸರ್ಕಾರಕ್ಕೆ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಈಗಾಗಲೇ ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪಿನ ಹಿನ್ನಲೆಯಲ್ಲಿ ಬಳ್ಳಾರಿ ವಿವಿ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಂ.ಮೇತ್ರಿ ಅವರನ್ನು ಕುಲಪತಿ ಹುದ್ದೆಯಿಂದ ರಾಜ್ಯಪಾಲರು ವಜಾ ಮಾಡಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕೆ.ಎಂ.ಮೇತ್ರಿ ವಿರುದ್ಧ ಸುಳ್ಳುಜಾತಿ ಪ್ರಮಾಣಪತ್ರದ ಬಗ್ಗೆ ಸಮಗ್ರ ತನಿಖೆಯಗಬೇಕು. ಮೇತ್ರಿ ಅವರ ಮೇಲಿನ ಆರೋಪಗಳು ಸಾಬೀತಾದಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಪಡೆದಿರುವ ಎಲ್ಲ ಆರ್ಥಿಕ ಸಂಪನ್ಮೂಲಗಳನ್ನು ಹಿಂದಕ್ಕೆ ಪಡೆದು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡಿರುವುದರಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಜಿಲ್ಲಾ ಸಂಚಾಲಕ ವಿ.ಎಸ್. ಶಿವಶಂಕರ್, ಯಂಕಮ್ಮ, ರಾಮಣ್ಣ, ಮಲ್ಲಿಕಾರ್ಜುನ, ಸತ್ಯಬಾಬು ಮತ್ತಿತರರಿದ್ದರು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.