ಬಸ್ಸಿಗೆ ಕಲ್ಲು ತೂರಿದ ಪ್ರಕರಣ ಪ್ರಸ್ತಾಪ: ಪಾಲಿಕೆ ಸಭೆ ಮೊಟಕು

| Published : Sep 01 2024, 01:46 AM IST

ಬಸ್ಸಿಗೆ ಕಲ್ಲು ತೂರಿದ ಪ್ರಕರಣ ಪ್ರಸ್ತಾಪ: ಪಾಲಿಕೆ ಸಭೆ ಮೊಟಕು
Share this Article
  • FB
  • TW
  • Linkdin
  • Email

ಸಾರಾಂಶ

ಸದಸ್ಯರ ಗದ್ದಲದ ನಡುವೆಯೇ ಕಾರ್ಯಸೂಚಿ ಮಂಡಿಸಲು ಮುಖ್ಯ ಸಚೇತಕರಿಗೆ ಮೇಯರ್‌ ಅನುಮತಿ ನೀಡಿದ್ದು, ಚರ್ಚೆಯೇ ಇಲ್ಲದೆ ಕಾರ್ಯಸೂಚಿಗಳಿಗೆ ಅನುಮೋದನೆ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಇತ್ತೀಚೆಗೆ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಬಸ್ಸಿಗೆ ಕಲ್ಲು ತೂರಿದ ವಿಚಾರ ಶನಿವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿ ಸಾಮಾನ್ಯ ಸಭೆ ಅರ್ಧಕ್ಕೇ ಮೊಟಕುಗೊಂಡಿತು. ಆಡಳಿತ- ವಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಸಭೆಯ ಕಾರ್ಯಸೂಚಿಗಳನ್ನು ಮಂಡಿಸಿ ಅಂಗೀಕರಿಸಲಾಯಿತು.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಹಿಂದಿನ ಸಭೆಯ ನಡಾವಳಿಗಳನ್ನು ಮೇಯರ್‌ ಸ್ಥಿರೀಕರಿಸಿದರು. ಬಳಿಕ ಕಳೆದ ಸಾಮಾನ್ಯ ಸಭೆಯಿಂದ ಈವರೆಗಿನ ಸಾಧನಾ ವಿವರ ನೀಡಲಾರಂಭಿಸಿದಾಗ ವಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ ಸೇರಿದಂತೆ ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ಸಾಮಾನ್ಯ ಸಭೆಯಲ್ಲಿ ನಿಮ್ಮ ಪ್ರಚಾರ ಬೇಡ, ಜನರ ಸಮಸ್ಯೆಗಳ ಬಗ್ಗೆ ನಮಗೆ ಮಾತನಾಡಲು ಅವಕಾಶ ಕೊಡಿ ಎಂದು ಆಗ್ರಹಿಸಿದರು. ಈ ನಡುವೆ ಆಡಳಿತ ಪಕ್ಷ ಸದಸ್ಯೆ ಸಂಗೀತಾ ನಾಯಕ್‌ ಬಸ್ಸಿಗೆ ಕಲ್ಲು ತೂರಿದ ವಿಚಾರದ ಕುರಿತು ಮಾತನಾಡಲು ಆರಂಭಿಸಿದಾಗ ಮಧ್ಯ ಪ್ರವೇಶಿಸಿದ ಪ್ರವೀಣ್‌ಚಂದ್ರ ಆಳ್ವ, ತನಗೆ ಮೊದಲು ಮಾತನಾಡಲು ಅವಕಾಶ ಕೊಡದೆ ಸದನದಲ್ಲಿ ವಿಪಕ್ಷಕ್ಕೆ ಅಗೌರವ ತೋರಿಸಲಾಗುತ್ತಿದೆ ಎಂದು ಹೇಳುತ್ತಾ ಮೇಯರ್‌ ಪೀಠದೆದುರು ತೆರಳಿ ಸದನದ ಬಾವಿಯಲ್ಲಿ ಕುಳಿತು ಎಲ್ಲ ವಿಪಕ್ಷ ಸದಸ್ಯರೊಡಗೂಡಿ ಪ್ರತಿಭಟನೆ ಆರಂಭಿಸಿದರು.

‘ವಿಪಕ್ಷ ಸದಸ್ಯರು ಪೂರ್ವಾಗ್ರಹ ಪೀಡಿತರಾಗಿ ಸದನಕ್ಕೆ ಬಂದಿದ್ದಾರೆ. ಸದನದಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶವಿದೆ. ಸದಸ್ಯೆ ಸಂಗೀತಾ ನಾಯಕ್‌ ಅವರು ಮುಖ್ಯ ವಿಚಾರದ ಬಗ್ಗೆ ಮಾತನಾಡಲು ಮುಂದಾದಾಗ ಅದನ್ನು ತಿಳಿದು ವಿಪಕ್ಷ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ದೂರಿದರು.ಗೂಂಡಾಗಿರಿ ಎಂದ ಮೇಯರ್‌: ಈ ವೇಳೆ ಆಡಳಿತ- ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತು. ಮೇಯರ್‌ ಸುಧೀರ್‌ ಶೆಟ್ಟಿ ಮಾತನಾಡಿ, ಪಾಲಿಕೆ ಇತಿಹಾಸದಲ್ಲಿ ನಾಮನಿರ್ದೇಶಿತ ಸದಸ್ಯರೊಬ್ಬರು ಬಸ್ಸಿಗೆ ಕಲ್ಲು ಬಿಸಾಡಿದ್ದು ಇದೇ ಮೊದಲು. ಇದು ಗೂಂಡಾಗಿರಿ ಎಂದು ಆರೋಪಿಸಿದರು. ಕಲ್ಲು ಹೊಡೆಯೋ ಸದಸ್ಯರು ಪಾಲಿಕೆಗೆ ಬೇಕಾ ಎಂದು ಇತರ ಸದಸ್ಯರು ಪ್ರಶ್ನಿಸಿದರು. ಮಾತಿನ ಚಕಮಕಿ, ಪರಸ್ಪರ ಘೋಷಣೆಗಳು ತಾರಕಕ್ಕೇರಿದ್ದು, ಆಡಳಿತ ಪಕ್ಷದ ಸದಸ್ಯರು ಕೂಡ ಸದನದ ಬಾವಿಗಿಳಿದು ವಿಪಕ್ಷ ಸದಸ್ಯರ ಎದುರು ನಿಂತು ಧಿಕ್ಕಾರ ಘೋಷಣೆ ಕೂಗತೊಡಗಿದರು.

ಈ ನಡುವೆ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌ ಮಾತನಾಡಲು ಕಾರ್ಡ್‌ಲೆಸ್‌ ಮೈಕ್‌ ಕೈಗೆತ್ತಿಕೊಂಡಿದ್ದು, ಅದಕ್ಕೆ ಸಂಪರ್ಕ ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಮೈಕ್‌ನ್ನು ನೆಲಕ್ಕೆಸೆದರು. ಈ ನಡವಳಿಕೆಯನ್ನು ವಿರೋಧಿಸಿದ ಆಡಳಿತ ಪಕ್ಷದ ಸದಸ್ಯರು, ಗೂಂಡಾ ಪ್ರವೃತ್ತಿಯ ಕಾಂಗ್ರೆಸ್‌ ಸದಸ್ಯರು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲಕಾಲ ತೀರ ಗದ್ದಲದ ವಾತಾವರಣ ಮುಂದುವರಿದಾಗ ಮೇಯರ್‌ ಸಭೆ ಮುಂದೂಡಿದರು. ಅರ್ಧ ಗಂಟೆ ಬಳಿಕ ಮತ್ತೆ ಸಭೆ ಆರಂಭವಾದಾಗ ಮತ್ತೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಪರಸ್ಪರ ಧಿಕ್ಕಾರ ಘೋಷಣೆಗಳು ಮೊಳಗಿದವು. ಸದಸ್ಯರ ಗದ್ದಲದ ನಡುವೆಯೇ ಕಾರ್ಯಸೂಚಿ ಮಂಡಿಸಲು ಮುಖ್ಯ ಸಚೇತಕರಿಗೆ ಮೇಯರ್‌ ಅನುಮತಿ ನೀಡಿದ್ದು, ಚರ್ಚೆಯೇ ಇಲ್ಲದೆ ಕಾರ್ಯಸೂಚಿಗಳಿಗೆ ಅನುಮೋದನೆ ಪಡೆಯಲಾಯಿತು.

ಉಪಮೇಯರ್‌ ಸುನೀತಾ, ಪಾಲಿಕೆ ಆಯುಕ್ತ ಆನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದರು.