ಜಾತಿ ಗಣತಿ ಕೇಂದ್ರ ನಮ್ಮನ್ನು ನೋಡಿ ಘೋಷಿಸಿದೆ

| Published : Jul 27 2025, 12:00 AM IST

ಸಾರಾಂಶ

ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಯೋಗ್ಯತೆ ಇಲ್ಲ ಎಂಬ ಮೈಸೂರು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರದಲ್ಲಿ ಗಣತಿ ಮಾಡುತ್ತಿದ್ದೇವೆ, ಹಿಂದೆ ಕೂಡ ಮಾಡಿದ್ದೆವು. ಆದರೆ ಆ ಬಗ್ಗೆ ಕೆಲವು ಸಂಘ ಸಂಸ್ಥೆಗಳು, ಪ್ರಬಲ ಸಮಾಜಗಳು ಅಪಸ್ವರ ಎತ್ತಿದ್ದರಿಂದ, ಮರುಗಣತಿ ಮಾಡಿ ಎಂದು ಹೇಳಿದ್ದರಿಂದ ಈಗ ಮತ್ತೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು. ಯದುವೀರ್ ಅವರು ಇನ್ನೂಎಲ್ಲಾ ಕಲಿತುಕೊಳ್ಳಲಿ,ಪಾಪ ಅವರಿಗಿನ್ನೂ ಅನುಭವ ಇಲ್ಲ, ಕೇಂದ್ರ ಸರ್ಕಾರ ನಮ್ಮನ್ನ ನೋಡಿ ಅನೌನ್ಸ್ ಮಾಡಿದೆ ಎಂದು ಕುಟುಕಿದರು.

ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡುವ ಯೋಗ್ಯತೆ ಇಲ್ಲ ಎಂಬ ಮೈಸೂರು ಸಂಸದ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ನಗರದ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ಪಾಪ ಅವರಿನ್ನೂ ಹೊಸದಾಗಿ ಎಂಪಿ ಆಗಿದ್ದಾರೆ, ಇನ್ನೂ ಸಂಸತ್ ಸದಸ್ಯರಾಗಿದ್ದು, ಅನುಭವ ಪಡೆದುಕೊಳ್ಳಲಿ ಎಂದು ಟಾಂಗ್ ನೀಡಿದರು. ನಾವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರದಲ್ಲಿ ಗಣತಿ ಮಾಡುತ್ತಿದ್ದೇವೆ, ಹಿಂದೆ ಕೂಡ ಮಾಡಿದ್ದೆವು. ಆದರೆ ಆ ಬಗ್ಗೆ ಕೆಲವು ಸಂಘ ಸಂಸ್ಥೆಗಳು, ಪ್ರಬಲ ಸಮಾಜಗಳು ಅಪಸ್ವರ ಎತ್ತಿದ್ದರಿಂದ, ಮರುಗಣತಿ ಮಾಡಿ ಎಂದು ಹೇಳಿದ್ದರಿಂದ ಈಗ ಮತ್ತೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದರು. ಯದುವೀರ್ ಅವರು ಇನ್ನೂಎಲ್ಲಾ ಕಲಿತುಕೊಳ್ಳಲಿ,ಪಾಪ ಅವರಿಗಿನ್ನೂ ಅನುಭವ ಇಲ್ಲ, ಕೇಂದ್ರ ಸರ್ಕಾರ ನಮ್ಮನ್ನ ನೋಡಿ ಅನೌನ್ಸ್ ಮಾಡಿದೆ ಎಂದು ಕುಟುಕಿದರು.ನಾವು ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಹೇಳಿದೆ, ರಾಹುಲ್‌ಗಾಂಧಿ ಇಡೀ ದೇಶದಲ್ಲಿ ಮುಂದಾಳತ್ವ ತಗೆದುಕೊಂಡಿದ್ದಾರೆ, ತೆಲಂಗಾಣದಲ್ಲಿ ಈಗಾಗಲೇ ಮಾಡಿದ್ದೇವೆ, ಇಲ್ಲೂ ಮಾಡುತ್ತೇವೆ ಎಂದರು. ಹಿಂದೆ ಜಾತಿಗಣತಿ ಮಾಡಿ ಹತ್ತು ವರ್ಷ ಆಗಿದೆ, ಅದಕ್ಕೆ ಹೊಸದಾಗಿ ಮಾಡಬೇಕು ಎಂದು ನಾನೇ ಪಕ್ಷದ ಅಧ್ಯಕ್ಷನಾಗಿ, ಜೊತೆಗೆ ಅನೇಕ ಸಚಿವರು ಸೇರಿ ಮುಖ್ಯಮಂತ್ರಿ ಅವರ ಮನವೊಲಿಸಿದೆವು, ನಮ್ಮ ಪಕ್ಷದ ಹೈಕಮಾಂಡ್ ಕೂಡ ಆದೇಶ ನೀಡಿತ್ತು. ಅದರಂತೆ ಹೊಸದಾಗಿ ಗಣತಿ ಆಗುತ್ತಿದೆ ಎಂದು ವಿವರಣೆ ನೀಡಿದರು.

ಮತಗಳ ಕಳ್ಳತನದ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂಬ ಬಿಜೆಪಿಯವರ ಹೇಳಿಕೆಗೆ, ಆಗಲೇ ದೆಹಲಿಯಲ್ಲಿ ಏನೇನು ಬೇಕು ಅದನ್ನು ಕೊಟ್ಟಿದ್ದೇವೆ ಎಂದು ಉತ್ತರಿಸಿದರು. ಗರಂ ಆದ ಡಿಸಿಎಂ:ಈ ನಡುವೆ ಮಾಧ್ಯಮದವರ ಮೇಲೆ ಡಿಸಿಎಂ ಗರಂ ಆದ ಪ್ರಸಂಗ ನಡೆಯಿತು. ಸಿಎಂ-ಡಿಸಿಎಂ ಒಟ್ಟಿಗೇ ಬಂದ ಬಗ್ಗೆ ಕೇಳಿದ್ದಕ್ಕೆ ಅಲ್ಲಾ ರೀ ಸುಮ್ನೆ ಏಕೆ, ನಿಮಗೆ ಬೇರೆ ಕೆಲಸ ಇಲ್ವಾ, ಒಟ್ಟಿಗೆ ಬರದೆ ಬೇರೆ ಬೇರೆ ಬರ್ತಾರಾ, ಎರಡಾಗಲಿ, ನಾಲ್ಕು ಹೆಲಿಕಾಪ್ಟರ್‌ ಆಗಲಿ, ಅವರು ದೆಹಲಿಯಿಂದ ಬಂದಿದ್ದಾರೆ, ನಾನು ಬೆಂಗಳೂರಿನಿಂದ ಬಂದೆ ಎಂದು ವಿವರಿಸಿದರು.