ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದಲ್ಲಿ ಕಾವೇರಿರುವ ಕಾವೇರಿ ಕಿಚ್ಚು ಇದೀಗ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಜನನಾಯಗನ್ ಚಿತ್ರದ ಕಡೆ ತಿರುಗಿದೆ. ನಗರದ ಗುರುಶ್ರೀ ಚಿತ್ರಮಂದಿರದ ಮುಂದಿದ್ದ ಚಿತ್ರದ ಪೋಸ್ಟರ್‌ನ್ನು ಹರಿದುಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಹೋರಾಟಗಾರರು ಆಗ್ರಹಿಸಿದ್ದು, ಪ್ರತಿಭಟನೆಗೆ ಹೆದರಿದ ಚಿತ್ರ ಮಂದಿರದ ವ್ಯವಸ್ಥಾಪಕರು ಪ್ರದರ್ಶನ ರದ್ದುಗೊಳಿಸುವ ಭರವಸೆ ನೀಡಿದರು.ತಮಿಳುನಾಡಿಗೆ ನೀರು ಹರಿಸುವ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶದ ವಿರುದ್ಧ ವಿಜಯಸೇನೆ ಸಂಘಟನೆಯಿಂದ ಗುರುವಾರ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ಕಾರ್ಯಕರ್ತರ ದೃಷ್ಟಿ ಗುರುಶ್ರೀ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಜನನಾಯಗನ್ ವಿರುದ್ಧ ನೆಟ್ಟಿತು. ವಿಜಯಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ದೀಪಕ್ ನೇತೃತ್ವದಲ್ಲಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ ಕಾರ್ಯಕರ್ತರು ತಮಿಳುನಾಡು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರು. ಚಿತ್ರಪ್ರದರ್ಶನ ಸ್ಥಗಿತಗೊಳಿಸುವಂತೆ ಚಿತ್ರಮಂದಿರದ ಮುಂದೆ ಹಾಕಿದ್ದ ಪೋಸ್ಟರ್‌ನ್ನು ಹರಿದುಹಾಕಿದರು.
ಸಂಕಷ್ಟ ಕಾಲದಲ್ಲಿ ಕಾವೇರಿ ವಿಷಯವಾಗಿ ಸೌಹಾರ್ದ ನಡೆ ಅನುಸರಿಸದೆ ನೀರಿನ ವಿಚಾರದಲ್ಲಿ ತಮಿಳುನಾಡು ಸಿಎಂ ವಿಜಯ್ ರಾಜಕೀಯ ನಡೆ ಅನುಸರಿಸುತ್ತಿದ್ದಾರೆ. ಮಳೆ ಕೊರತೆಯಿಂದ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದೆ ನೀರಿಗೆ ಬೇಡಿಕೆ ಇಡುತ್ತಿರುವುದು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನಮ್ಮ ಕಷ್ಟಗಳಿಗೆ ವಿಜಯ್ ಸ್ಪಂದಿಸದಿದ್ದಾಗ ನಾವೇಕೆ ಅವರ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕು. ಕೂಡಲೇ ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.ಚಿತ್ರ ಮಂದಿರಕ್ಕೆ ಮುತ್ತಿಗೆ ಹಾಕಿದ್ದರಿಂದ ಆತಂಕಕ್ಕೊಳಗಾದ ವ್ಯವಸ್ಥಾಪಕರು ಪ್ರತಿಭಟನಾಕಾರರ ಬಳಿಗೆ ಆಗಮಿಸಿ ಮಾತುಕತೆ ನಡೆಸಿದರು. ಗಲಾಟೆ, ಗದ್ದಲ ಮಾಡದಂತೆ ಮನವಿ ಮಾಡಿದರು. ವಿಜಯ್ ಸೇನೆ ಸಂಘಟನೆಯ ದೀಪಕ್ ಅವರು ಕೂಡಲೇ ಜನನಾಯಗನ್ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು. ಮುಂದೆ ಚಿತ್ರವನ್ನು ಪ್ರದರ್ಶಿಸದಂತೆ ಒತ್ತಾಯಿಸಿದರು. ಆಗ ವ್ಯವಸ್ಥಾಪಕರು ಚಿತ್ರ ಅರ್ಧ ಮುಗಿದಿದೆ. ಈ ಪ್ರದರ್ಶನ ಮುಗಿದ ನಂತರ ಚಿತ್ರ ಪ್ರದರ್ಶಿಸುವುದಿಲ್ಲವೆಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಅಲ್ಲಿಂದ ಹೊರನಡೆದರು.
ಗುರುಶ್ರೀ ಚಿತ್ರಮಂದಿರದಲ್ಲಿ ಅಳವಡಿಸಿದ್ದ ಜನನಾಯಗನ್ ಸಿನಿಮಾದ ಪೋಸ್ಟರ್, ಬ್ಯಾನರ್‌ಗಳನ್ನು ಸ್ವಯಂಪ್ರೇರಿತರಾಗಿ ಚಿತ್ರಮಂದಿರದ ಸಿಬ್ಬಂದಿ ತೆರವುಗೊಳಿಸಿದರು. ಪ್ರತಿಭಟನಾಕಾರರ ಆಕ್ರೋಶದಿಂದ ಎಚ್ಚೆತ್ತ ಚಿತ್ರಮಂದಿರ ವ್ಯವಸ್ಥಾಪಕರು ಮುಂಜಾಗ್ರತೆಯಾಗಿ ಕ್ರಮ ವಹಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ:
ಗುರುಶ್ರೀ ಚಿತ್ರಮಂದಿರದಿಂದ ಹೊರಟ ವಿಜಯಸೇನೆ ಸಂಘಟನೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬಾಗಿಲ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ಜನರು, ರೈತರನ್ನು ಬಿಟ್ಟು ತಮಿಳುನಾಡು ಮೆಚ್ಚಿಸುವ ಕೆಲಸ ಮಾಡಬೇಡಿ. ನಮ್ಮಲ್ಲಿ ಕುಡಿಯುವ ನೀರಿಲ್ಲ, ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಗೆ ಡಿ.ಕೆ.ಶಿವಕುಮಾರ್ ಮಣಿಯಬಾರದು. ಕಾನೂನು ಸಂಕಷ್ಟ ಎದುರಾದರೂ ರೈತರ ಹಿತ ಕಾಪಾಡುವುದು ಮುಖ್ಯ ಧ್ಯೇಯವಾಗಬೇಕು ಎಂದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಒಮ್ಮೆ ಒತ್ತಡಕ್ಕೆ ಕಟ್ಟುಬಿದ್ದು ನೀರು ಬಿಡುಗಡೆ ಮಾಡುವ ನಿರ್ಧಾರ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.