ಸಾರಾಂಶ
ಧಾರವಾಡ:
ಪದವಿ, ಸ್ನಾತಕೋತ್ತರ ಪದವಿ, ಪಿಎಚ್. ಡಿ ಪದವಿ ಕೊರಳಿಗೇರಿಸಿಕೊಂಡ ಅಭ್ಯರ್ಥಿಗಳು ಮಾತ್ರವಲ್ಲದೇ ತಮ್ಮ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಚಿನ್ನದ ಹುಡುಗ-ಹುಡುಗಿಯರ ಸಂಭ್ರಮ ಇಮ್ಮಡಿಯಾಗಿತ್ತು. ಪದವಿ ಪ್ರಮಾಣ ಪಡೆಯುತ್ತಿರುವಾಗ ಹಾಗೂ ಚಿನ್ನದ ಪದಕ ಕೊರಳಿಗೇರಿಸಿಕೊಳ್ಳುವಾಗ ಪ್ರತಿಯೊಬ್ಬರ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಮಂಗಳವಾರ 74ನೇ ಘಟಿಕೋತ್ಸವ ಹಿನ್ನೆಲೆಯಲ್ಲಿ ಕಂಡು ಬಂದ ದೃಶ್ಯವಿದು. ಘಟಿಕೋತ್ಸವದಲ್ಲಿ 25,424 ವಿದ್ಯಾರ್ಥಿಗಳು ಸ್ನಾತಕ-ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದರು. ಘಟಿಕೋತ್ಸವದಲ್ಲಿ 161 ಪಿಎಚ್‌ಡಿ, 21,139 ಪದವಿ, 45 ಕಾನೂನು ಪದವಿ, 22 ಡಿಪ್ಲೊಮಾ ಹಾಗೂ 4,067 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಎಸ್. ಅಯ್ಯಪ್ಪನ್ ಅವರಿಂದ ಸ್ವೀಕರಿಸಿದರು.
ಚಿನ್ನದ ಹುಡುಗಿಯರು..ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಬಾಗಲೋಟಿ ಜಿಲ್ಲೆ ಹುನಗುಂದ ತಾಲೂಕಿನ ಹಿರೇಕೊಡಲಿ ಗ್ರಾಮದ ಜಯಶ್ರಿ ತಳವಾರ ಹಾಗೂ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಲಕ್ಷ್ಮೇಶ್ವರದ ಸಂಗೀತಾ ಲಕ್ಕಪ್ಪನವರ ಇಬ್ಬರೂ ಚಿನ್ನದ ಹುಡುಗಿಯರಾಗಿ ಹೊರಹೊಮ್ಮಿದರು.
ಗಣಿತಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ ಹೊನ್ನಾವರ ತಾಲೂಕಿನ ತನ್ಮಡಿಗೆ ಗ್ರಾಮದ ಶ್ರೀಲಕ್ಷ್ಮಿ ಗೋಪಾಲಕೃಷ್ಣ ಹೆಗಡೆ, ಗ್ರಂಥಾಲಯ ವಿಜ್ಞಾನದಲ್ಲಿ ರಚನಾ ದಿನೇಶ ಶಿವಳ್ಳಿ, ಬಯೋ ಕೆಮೇಸ್ಟ್ರೀಯಲ್ಲಿ ಹರ್ಷಿತಾ ಡಿ ತಲಾ ಎಂಟು ಚಿನ್ನದ ಪದಕ ಪಡೆದು ಸಂಭ್ರಮಿಸಿದರು. ವಿದೇಶಿ ಭಾಷಾ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ರೊಜಟ್ ರಾಬರ್ಟ್ ದದ್ದಾಪುರಿ ಏಳು ಚಿನ್ನದ ಪದಕ ಪಡೆದರು.ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಮಾತನಾಡಿ, ಕೋವಿಡ್ ನಂತರದಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಹೀಗಾಗಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಜಾರಿಗೆ ತರಲು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೆ ಮಾತನಾಡಿದ್ದೇನೆ. ಮುಂದಿನ ವರ್ಷದಲ್ಲಿ ಸರಿಯಾಗಲಿದೆ. ಇನ್ನು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸಿದೆ. ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೌಶಲಯುತ ಶಿಕ್ಷಣಕ್ಕೆ ಆದ್ಯತೆ ನೀಡಿ, ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸಿದ್ದೇವೆ. ಈಗಾಗಲೇ 45 ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಆರಂಭವಾಗಿವೆ. ಇದರಿಂದ ವಿದ್ಯಾರ್ಥಿಗಳು ಸರಳವಾಗಿ ಉದ್ಯೋಗ ಪಡೆಯುವಂತಾಗಲಿದೆ ಎಂದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್. ಅಯ್ಯಪ್ಪನ್ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ. ಕೆ.ಬಿ. ಗುಡಸಿ ಸ್ವಾಗತಿಸಿದರು. ಕುಲಸಚಿವರಾದ ಡಾ. ಎ. ಚನ್ನಪ್ಪ, ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು, ವಿದ್ಯಾರ್ಥಿಗಳಿದ್ದರು. ಕಾರ್ಯಕ್ರಮದ ಅಶಿಸ್ತು...ಕರ್ನಾಟಕ ವಿಶ್ವ ವಿದ್ಯಾಲಯವನ್ನು ನಾಲ್ಕು ವರ್ಷ ಉತ್ತಮವಾಗಿ ಮುನ್ನಡೆಸಿದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅವರ ವಿದಾಯದ ಘಟಿಕೋತ್ಸವ ಇದಾಗಿದೆ. ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗೌರವದಿಂದ ನಡೆದುಕೊಳ್ಳುವ ಬದಲು ಅಶಿಸ್ತು ಪ್ರದರ್ಶಿಸಿದ್ದು ನೋವಿನ ಸಂಗತಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪಡೆದ ಖುಷಿ ಇದೆ. ಆದರೆ ಅತಿಥಿಗಳ ಹಿತ ನುಡಿಗಳನ್ನು ಕೇಳುವ ವ್ಯವಧಾನ ಇಲ್ಲ ಎಂದು ವೇದಿಕೆಯ ಭಾಷಣದಲ್ಲಿಯೇ ಸಚಿವರು ಕಿಡಿಕಾರಿದರು.ಮೂವರಿಗೆ ಗೌಡಾ ಪ್ರದಾನ...
ಆಂಧ್ರಪ್ರದೇಶದ ವಿಜಯವಾಡದ ಗೊಲ್ಲಪುಡಿ ಮೂಲದ, ರೈಲ್ವೆ ಇಲಾಖೆಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದ ಹುಬ್ಬಳ್ಳಿಯ ಡಾ. ವೆಂಕಟ ಸತ್ಯ ವರಪ್ರಸಾದ ಚಿಗುರುಪಾಟಿ (ವಿಎಸ್‌ವಿ ಪ್ರಸಾದ), ಬಾಗಲಕೋಟೆ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದ ಶ್ರೀ ನಿರುಪಾಧೀಶ ಸ್ವಾಮೀಜಿ, ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಕಟ್ಟಿಬೆಳೆಸಿದ ಶಿಕ್ಷಣ ತಜ್ಞ ಎಸ್.ಎನ್. ವೆಂಕಟಲಕ್ಷ್ಮೀ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.