ಬಹುಸಂಖ್ಯಾತರ ಆಚರಣೆ, ಸಂಸ್ಕೃತಿಗೆ ತಡೆಹೊಡ್ಡುವ ಹುನ್ನಾರ

| Published : Jan 13 2025, 12:47 AM IST

ಸಾರಾಂಶ

ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪ್ರಾಣಿಬಲಿ ನಡೆಯುತ್ತದೆ ಎಂದು ಹುಯಿಲೆಬ್ಬಿಸುತ್ತಿರುವ ಪ್ರಾಣಿ ದಯಾ ಸಂಘ ಮತ್ತು ನ್ಯಾಯಾಲಯದ ಆದೇಶವನ್ನು ಕಡೆಗಣಿಸುತ್ತಿರುವ ಜಿಲ್ಲಾಡಳಿತ ಅವಿವೇಕದ ನಡೆ ಅನುಸರಿಸಿವೆ ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪ್ರಾಣಿಬಲಿ ನಡೆಯುತ್ತದೆ ಎಂದು ಹುಯಿಲೆಬ್ಬಿಸುತ್ತಿರುವ ಪ್ರಾಣಿ ದಯಾ ಸಂಘ ಮತ್ತು ನ್ಯಾಯಾಲಯದ ಆದೇಶವನ್ನು ಕಡೆಗಣಿಸುತ್ತಿರುವ ಜಿಲ್ಲಾಡಳಿತ ಅವಿವೇಕದ ನಡೆ ಅನುಸರಿಸಿವೆ ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ೨೦೧೭ರ ಹೈಕೋರ್ಟಿನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಒಕ್ಕಲುತನದ ಬಹುಜನರ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ ಎಂದರು.

ಬಲಿ-ಪಂಕ್ತಿ ಸೇವೆ ಬಗ್ಗೆ ವಿವೇಚನೆ ಮಾಡದೇ ಜಿಲ್ಲಾಡಳಿತ ಸಿದ್ದಪ್ಪಾಜಿಯವರ ಜಾತ್ರೆಯಲ್ಲಿ ಬಲಿ ನಡೆಯತ್ತದೆ. ಇದನ್ನು ತಡೆಯಬೇಕು ಎಂಬ ಆದೇಶ ಹೊರಡಿಸಿ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿರುವುದನ್ನು ನಮ್ಮ ಸಮಿತಿ ಖಂಡಿಸುತ್ತದೆ. ಈ ಮೂಲಕ ಬಹುಸಂಖ್ಯಾತರ ಅಚರಣೆ ಮತ್ತು ಸಂಸ್ಕೃತಿಗೆ ತಡೆಹೊಡ್ಡುವ ಹುನ್ನಾರ ನಡೆಯುತ್ತಿದೆ ಎಂದರು.ಈ ಬಾರಿ ನಾವು ಎಲ್ಲೆಲ್ಲಿ ಸೆಕ್ಟೆರ್‌ಗಳನ್ನು ನೇಮಿಸಿದ್ದಾರೆ ಅಲ್ಲೆಲ್ಲ ಹೈಕೋರ್ಟಿನ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಫ್ಲೆಕ್ಸ್‌ಗಳನ್ನು ಹಾಕಿ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪಂಕ್ತಿ ಸೇವೆ ಮಾಡುವಂತೆ ತಿಳಿಸುತ್ತೇವೆ. ತಡೆಯೊಡ್ಡಿದ ಕಡೆ ಪ್ರತಿಭಟಿಸುತ್ತೇವೆ, ಆಧ್ಯಾತ್ಮ ಸಂದೇಶ ಯಾತ್ರೆ ಮಾಡುತ್ತಿರುವ ದಯಾನಂದ ಸ್ವಾಮೀಜಿ ಜಾತ್ರಾ ಸ್ಥಳಕ್ಕೆ ಬಂದರೆ ತಡೆಯೊಡ್ಡುತ್ತೇವೆ. ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದರು.

ಪ್ರಾಣಿ ಬಲಿಯನ್ನು ನಾವು ವಿರೋಧಿಸುತ್ತೇವೆ ಇಲ್ಲಿ ಯಾವುದೇ ಬಲಿ ಪೀಠವಿಲ್ಲ, ಮಂಟೇಸ್ವಾಮಿ ಪರಂಪರೆಯಲ್ಲಿ ಮೌಢ್ಯಗಳಿಗೆ ಅವಕಾಶವಿಲ್ಲ. ವರ್ಷಕ್ಕೊಮ್ಮೆ ಜಾತ್ಯಾತೀತವಾಗಿ ನಡೆಯವ ಈ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಕೆಲವರು ಸಸ್ಯಹಾರಿಗಳಾದರೆ ಕೆಲವರು ಮಾಂಸಾಹಾರಿಗಳು ಆಹಾರ ತಯಾರಿಸಿ ಪಂಕ್ತಿ ಸೇವೆ ಮಾಡಿ ಎಲ್ಲರನ್ನು ಊಟಕ್ಕೆ ಕರೆದು ಊಟ ಹಾಕುತ್ತಾರೆ, ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.

ಇದು ತಲಾತಲಾಂತರದಿಂದ ನಡೆದುಕೊಂಡು ಬಂದಿದೆ, ಇದಕ್ಕೆ ತಡೆಯೊಡ್ಡಬಾರದು ಜಿಲ್ಲೆಯ ಶಾಸಕರು, ಸಂಸದರು ಈ ಬಗ್ಗೆ ಮಾತನಾಡಬೇಕು ಎಂದರು.

ಕಾರ್ಯದರ್ಶಿ ಮಹದೇವ ಶಂಕನಪುರ ಮಾತನಾಡಿ, ಮಂಟೇಸ್ವಾಮಿ ಪರಂಪರೆಯನ್ನೇ ಮುಗಿಸಿ ತಮ್ಮದೇ ಆದ ಪೂಜಾ ಪದ್ಧತಿಯನ್ನು ಹೇರುವ ಹುನ್ನಾರ ನಡೆದಿದೆ. ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿ ಪರಂಪರೆ ಬಗ್ಗೆ ಮನವರಿಕೆ ಮಾಡಿಕೊಟ್ಟರು, ಯಾವುದೇ ಪ್ರಯೋಜನವಾಗಿಲ್ಲ ಈ ಬಾರಿ ನ್ಯಾಯಾಲಯದ ಆದೇಶದಂತೆ ಪರಂಪರೆಗೆ ಯಾವುದೇ ತಡೆವೊಡ್ಡಬಾರದು, ತಡೆಯೊಡ್ಡಿದರೆ ಮತ್ತೇ ನಾವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುರಿ, ಕೋಳಿ, ಮೇಕೆ ಹಸು ಇವುಗಳು ಸಾಕುವುದು ಆಹಾರಕ್ಕಾಗಿಯೇ ಇದನ್ನು ಅರಿಯಬೇಕು. ಪಂಕ್ತಿ ಸೇವೆ ಎನ್ನುವುದು ದೇವರ ಹೆಸರಿನಲ್ಲಿ ನಡೆದುಕೊಂಡು ಬಂದಿರುವ ಒಂದು ಪರಂಪರೆ, ಜನಪ್ರತಿನಿಧಿಗಳು ಈ ಬಗ್ಗೆ ಸೂಚಿಸಿದ್ದಾರೆ ಅವರ ಸೂಚನೆಯನ್ನು ಧಿಕ್ಕರಿಸಿರುವ ಜಿಲ್ಲಾಡಳಿತ-ಪ್ರಾಣಿ ದಯಾ ಸಂಘದ ನಡೆ ಆನಾಗರೀಕ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ ಎಂದರು.

ಸಮಿತಿಯ ಶಂಭುಲಿಂಗಸ್ವಾಮಿ, ಶಿವಲಿಂಗೇಗೌಡ, ಮಹದೇವಸ್ವಾಮಿ ಇದ್ದರು.