ರಥಸಪ್ತಮಿ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಪ್ರಸಿದ್ಧ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಮೊದಲಿಗೆ ಸೂರ್ಯ ಮೂಡುವ ಬೆಳಗಿನ ಜಾವ ವಿಶೇಷ ಪೂಜೆಗಳೊಂದಿಗೆ ರಂಗನಾಥನಿಗೆ ಎಣ್ಣೆ ಮಜನಾ, ಕ್ಷಿರಾಭಿಷೇಕ ಮಾಡಿ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಥಸಪ್ತಮಿ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಪ್ರಸಿದ್ಧ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.ಮೊದಲಿಗೆ ಸೂರ್ಯ ಮೂಡುವ ಬೆಳಗಿನ ಜಾವ ವಿಶೇಷ ಪೂಜೆಗಳೊಂದಿಗೆ ರಂಗನಾಥನಿಗೆ ಎಣ್ಣೆ ಮಜನಾ, ಕ್ಷಿರಾಭಿಷೇಕ ಮಾಡಿ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ನಂತರ ದೇವಾಲಯದ ಮುಂಭಾಗ ಸೂರ್ಯನಿಗೆ ಮಂಡಲ ಪೂಜೆ ನೆರವೇರಿಸಿ ಶ್ರೀರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮಂಡಲದಲ್ಲಿ ಪ್ರತಿಸ್ಥಾಪಿಸಿ ಅಲಂಕಾರ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೂರ್ಯಮಂಡಲ ಉತ್ಸವವನ್ನು ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ನಂತರ ಶ್ರೀರಂಗನಾಯಕಿ ದೇವಿ ಸಮೇತ ಶ್ರೀರಂಗನಾಥಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪೂಜಿಸಿ ರಥದ ಸುತ್ತಲೂ ಮೆರವಣಿಗೆ ಮಾಡಿ ಬ್ರಹ್ಮ ರಥದ ಮೇಲೆ ಕೂರಿಸಿ ದೇವಾಲಯದ ಮುಖ್ಯ ಅರ್ಚಕ ವಿಜಯಸಾರಥಿ ಅವರಿಂದ ಗೋವಿಂದ, ಗೋವಿಂದ ಎಂದು ವೇದ ಘೋಷ ಮೊಳಗಿಸಿ ಅರ್ಚಕರು ರಥೋತ್ಸವಕ್ಕೆ ಪೂಜೆ ನೆರವೇರಿಸಿದರು.ಮಧ್ಯಾಹ್ನ 3.15ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಶಿವಾನಂದಮೂರ್ತಿ, ಡಾ.ಭಾನುಪ್ರಕಾಶ್ ಶರ್ಮ ಜೊತೆಗೂಡಿ ಭ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಾಲಯದ ಆವರಣದಲ್ಲಿ ನೆರೆದ ಸಾವಿರಾರು ಭಕ್ತರು ರಥದ ಹಗ್ಗ ಹಿಡಿದು ಎಳೆಯುವಾಗ ಉಘೇ, ಉಘೇ ಘೋಷಣೆಗಳನ್ನು ಮೊಳಗಿದವು. ನೆರೆದಿದ್ದ ಭಕ್ತರು ರಥಕ್ಕೆ ಹಣ್ಣು, ದವನ ಎಸೆದರು. ಹರಕೆ ಹೊತ್ತವರು ತುಪ್ಪ, ದೀಪದ ಸೇವೆ ಸಲ್ಲಿಸಿದರು.ಶ್ರೀರಂಗನಾಥಸ್ವಾಮಿ ದೇವಾಲಯದ ಒಂದು ಸುತ್ತು ರಥವನ್ನು ಪ್ರದಕ್ಷಿಣೆ ಮಾಡಲಾಯಿತು. ಅನ್ನದಾನಿಗಳಿಂದ ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ ಪಾನಕ, ಕೋಸುಂಬರಿ ಹಾಗೂ ಅನ್ನ ಸಂತರ್ಪಣೆ ವಿನಿಯೋಗವನ್ನು ಮಾಡಲಾಗುತ್ತಿತ್ತು.
ನೂತನವಾಗಿ ಮದುವೆಯಾದ ನವದಂಪತಿಗಳು ಜಾತ್ರೆಯಲ್ಲಿ ರಥೋತ್ಸವಕ್ಕೆ ಹಣ್ಣು ಜವನವನ್ನು ಎಸೆದು ತಮ್ಮ ಭಕ್ತಿ ಭಾವವನ್ನು ಪ್ರದರ್ಶಿಸಿದರು. ದೇವಾಲಯದ ಮುಂಬಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆದು ತಿಂಡಿ, ತಿನಸುಗಳನ್ನು ಖರೀದಿಸಲು ಹೆಚ್ಚು ಹೆಚ್ಚು ಜನರು ಕಾಣಿಸಿಕೊಳ್ಳುತ್ತಿದ್ದರು. ದೇವಾಲಯದ ಸುತ್ತಲೂ ಪೊಲೀಸರು ಭಕ್ತಾದಿಗಳಿಗೆ ಭದ್ರತೆ ಒದಗಿಸಿದ್ದರು.ರಥೋತ್ಸವದ ವೇಳೆ ತಹಸೀಲ್ದಾರ್ ಚೇತನಾ ಯಾದವ್, ದೇವಾಲಯದ ಇಒ ಉಮಾ, ದೇವಾಲಯ ಸಮಿತಿ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಆನಂದ್, ಕಮಲಮ್ಮ, ಆಶಾಲತಾ ಪುಟ್ಟೇಗೌಡ, ಸತೀಶ್ ಸೇರಿದಂತೆ ಇತರ ಅಧಿಕಾರಿ ವರ್ಗ ಇದ್ದರು.