ಹಾನಗಲ್ಲು ಶೆಟ್ಟಳ್ಳಿ: ಸಂಭ್ರಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

| Published : Apr 30 2024, 02:00 AM IST

ಹಾನಗಲ್ಲು ಶೆಟ್ಟಳ್ಳಿ: ಸಂಭ್ರಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇವರ ಒಡೆಕಾರರು ಹಾಗೂ ಗ್ರಾಮಸ್ಥರು ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸಂಪನ್ನಗೊಂಡಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿಗೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ ಹಲವು ಧಾರ್ಮಿಕ ಆಚರಣೆಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಏ.18ರಂದು ಗ್ರಾಮದಲ್ಲಿ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಆ ದಿನದಿಂದಲೂ ಗ್ರಾಮದಲ್ಲಿ ಹಲವು ಕಟ್ಟುಪಾಡುಗಳೊಂದಿಗೆ ವಿಶೇಷ ಶ್ರದ್ಧೆಯಿಂದ ದೇವರ ಒಡೆಕಾರರು ಹಾಗೂ ಗ್ರಾಮಸ್ಥರು ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಬೀರೇದೇವರಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವದಲ್ಲಿ ದೇವರಿಗೆ ಊಲು ಏರಿಸುವುದು, ದೊಡ್ಡಸುಗ್ಗಿ, ಮಹಾಮಂಗಳಾರತಿ, ಹಗಲು ಸುಗ್ಗಿ, ಹೆದ್ದೇವರ ಪೂಜೆ, ಮಲ್ಲು ಸುಗ್ಗಿ, ಪ್ರಸಾದ ವಿನಿಯೋಗ ನಡೆದವು.

29ರಂದು ಬೆಳಗ್ಗೆಯಿಂದಲೂ ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಸಬ್ಬಮ್ಮ ದೇವಿಯ ದೇವಾಲಯ ಹಾಗೂ ಸುಗ್ಗಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು. ಸುಗ್ಗಿ ಕಂಬದಲ್ಲಿ ದೇವರ ಊಲು ತೂಗುವುದು, ಮಲ್ಲು ಕುಣಿಯುವುದು, ಬಿಲ್ಲು ಕುಣಿತ, ಬಾಳೆ ಚೊಟ್ಟೆ ಕುಣಿತ, ಸುಗ್ಗಿ ಕುಣಿತ, ದೇವರಿಗೆ ಈಡುಗಾಯಿ ಹಾಕುವ ಕಾರ್ಯಗಳು ನಡೆದವು.

ಈ ಸಂದರ್ಭ ಗ್ರಾಮಸ್ಥರಿಗೆ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಕ್ಕಳಿಗೆ ಕಾಯಿ ಕೀಳುವ ಸ್ಪರ್ಧೆಗಳು ನಡೆದವು. ದೇವರ ಒಡೆಕಾರರು ವಿಶೇಷ ಶುದ್ಧಿಯೊಂದಿಗೆ ಸುಗ್ಗಿ ಕಟ್ಟೆಯಲ್ಲಿ ಪೂಜೆ ಸಲ್ಲಿಸಿದರು. ಗ್ರಾಮವು ಸುಭೀಕ್ಷೆಯಲ್ಲಿರಲಿ, ಉತ್ತಮ ಮಳೆ-ಬೆಳೆಯಾಗಲಿ, ಜನ ಜಾನುವಾರುಗಳಿಗೆ ರೋಗ ರುಜಿನ ಹರಡದಂತೆ ಶ್ರೀ ಸಬ್ಬಮ್ಮ ತಾಯಿ ಕಾಪಾಡಬೇಕು ಎಂದು ಗ್ರಾಮಸ್ಥರು ಹಾಗೂ ಭಕ್ತಾದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

30ರಂದು ಮಾರಮ್ಮನ ಪೂಜೆ ಹಾಗೂ ಸುಗ್ಗಿ ಮುಕ್ತಾಯ ಪೂಜೆಯೊಂದಿಗೆ ಪ್ರಸಕ್ತ ಸಾಲಿನ ಸುಗ್ಗಿ ಉತ್ಸವಕ್ಕೆ ವಿಧ್ಯುಕ್ತ ತೆರೆ ಬೀಳಲಿದೆ ಎಂದು ಶ್ರೀ ಸಬ್ಬಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಲ್.ಎಂ. ಪ್ರಸನ್ನ ತಿಳಿಸಿದ್ದಾರೆ.

ಈ ಬಾರಿಯ ಉತ್ಸವದ ಉಸ್ತುವಾರಿಯನ್ನು ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಪವನ್, ಖಜಾಂಚಿ ಎಂ.ಟಿ. ಉಮೇಶ್, ಮರಣ ನಿಧಿ ಖಜಾಂಚಿ ಎಲ್.ಈ. ವೆಂಕಟೇಶ್, ಸಲಹೆಗಾರ ಡಿ.ಟಿ. ರವಿ, ಡಿ.ಪಿ. ಲೋಕೇಶ್, ಸಚಿನ್, ಎಂ.ಎಸ್. ರಾಜೇಶ್ ಅವರು ವಹಿಸಿದ್ದರು. ದೇವರ ಒಡೆಕಾರರಾಗಿ ಡಿ.ಆರ್. ದಿನೇಶ್, ಎ.ಜೆ. ರಘು, ಎಲ್.ಕೆ. ಚಂದ್ರಶೇಖರ್, ಎಂ.ಕೆ. ಪ್ರಸನ್ನ ವಿಶೇಷ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಶಾಸಕ ಡಾ. ಮಂಥರ್ ಗೌಡ ಸೇರಿದಂತೆ ಗ್ರಾಮಸ್ಥರು, ಗ್ರಾಮದ ಪ್ರಮುಖರು ಸುಗ್ಗಿಯಲ್ಲಿ ಭಾಗಿಯಾಗಿದ್ದರು.