ಸಂಭ್ರಮದ ಶ್ರೀಕರಿಯಮ್ಮ ರಥೋತ್ಸವ

| Published : May 12 2024, 01:17 AM IST

ಸಾರಾಂಶ

ತಾಲೂಕಿನ ಕಣಕಟ್ಟೆ ಗ್ರಾಮದೇವತೆ ಶ್ರೀಕರಿಯಮ್ಮ ಮಹಾರಥೋತ್ಸವವು ಗುರುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದೇವತೆ ಶ್ರೀಕರಿಯಮ್ಮ ಮಹಾರಥೋತ್ಸವವು ಗುರುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ೧ವಾರದಿಂದ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ವಿವಿಧ ಉತ್ಸವಾದಿಗಳು ಧಾರ್ಮಿಕ ಕಾರ್ಯವನ್ನು ಸಾಕ್ಷೀಕರಿಸಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಕೃತಾರ್ತರಾದರು. ಗ್ರಾಮ ದೇವತೆಗಳಾದ ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ, ಶ್ರೀ ಚೌಡಮ್ಮ, ಹಾಗೂ ಮೂರು ಕಣ್ಣು ಮಾರಮ್ಮ ನವರ ನೇತ್ರತ್ವದಲ್ಲಿ ನೆರವೇರಿತು.

ಗುರುವಾರ ಬೆಳಿಗ್ಗೆ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನುಶಾಸ್ತ್ರೋಕ್ತವಾಗಿ ನಡೆಸುವ ಮೂಲಕ ದೇವಸ್ಥಾನದ ಆವರಣದಲ್ಲಿನ ಮಹಾರಥಕ್ಕೆ ವಿವಿಧ ಬಣ್ಣಗಳಿಂದ ಕೂಡಿದ ಬಾವುಟಗಳು ,ಶೃಂಗಾರ ಬಾಳೆಕಂದು ಎಳನೀರಿನ ಗೊನೆಗಳಿಂದ ಮತ್ತು ವಿವಿಧ ಬಗೆಯ ಹೂವು, ಹಾರಗಳಿಂದ ವಿನೂತನವಾಗಿ ಶೃಂಗರಿಸಿ ಸಂಪ್ರದಾಯದಂತೆ ವಿಶೇಷ ವಿಧಿ ವಿಧಾನಗಳಂತೆ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಪಾನಕದ ಗಾಡಿ ಕುರಿಗಳ ಹಿಂಡು ರಥದ ಸುತ್ತ ಪ್ರದಕ್ಷಿಣೆ ಮಾಡಿ ತಮ್ಮ ಹರಕೆ ಸಲ್ಲಿಸಿದರು.ನಂತರ ಗ್ರಾಮದೇವತೆ ಶ್ರೀಕರಿಯಮ್ಮನವರ ಉತ್ಸವಮೂರ್ತಿಗಳನ್ನು ಕೂರಿಸಿದ ಸಹಸ್ರಾರು ಭಕ್ತರು ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿಯ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆಯುವ ಮೂಲಕ ಹರ್ಷೋದ್ಗಾರ ಮೆರೆದರು.

ಈ ವೇಳೆ ನೆರೆದಿದ್ದ ಸಹಸ್ರಾರು ಭಕ್ತರು ಬಾಳೇಹಣ್ಣು ಹಾಗೂ ದವನ ಪುಷ್ಪಗಳನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಸಾರ್ವಜನಿಕರಿಗೆ ಕುಡಿಯಲು ತಂಪಾದ ಪಾನಕ ಮತ್ತು ನೀರು ಮಜ್ಜಿಗೆ ಹಾಗೂ ಕೊಸಂಬರಿ ಇತ್ಯಾದಿ ಪ್ರಸಾದಗಳನ್ನು ಹಂಚಲಾಯಿತು. ದೇವಾಲಯ ಆಡಳಿತ ಸಮಿತಿಯಿಂದ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.