ಬರದ ವಿಷಯವಾಗಿ ಕೇಂದ್ರ ಯಾವ ಜವಾಬ್ದಾರಿ ನಿಭಾಯಿಸಿಲ್ಲ

| Published : Nov 16 2023, 01:17 AM IST / Updated: Nov 16 2023, 01:18 AM IST

ಸಾರಾಂಶ

ಬರ ಪರಿಶೀಲನೆ ವೇಳೆ ಎಂ.ಬಿ.ಪಾಟೀಲ ಏನಂದ್ರು?

ಕನ್ನಡಪ್ರಭ ವಾರ್ತೆ ವಿಜಯಪುರ

ಕೇಂದ್ರ ಸರ್ಕಾರ ಬರದ ವಿಷಯವಾಗಿ ಯಾವ ಜವಾಬ್ದಾರಿ ನಿಭಾಯಿಸಿಲ್ಲ. ಇದು ರೈತ ವಿರೋಧಿ ನೀತಿ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಕೇಂದ್ರದ ವಿರುದ್ಧ ಹರಿಹಾಯ್ದರು.

ಇಂಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅಧ್ಯಯನ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರದಲ್ಲಿ 26 ಸಂಸದರನ್ನು ಹೊಂದಿರುವ ಸಂಸದರ ಪೈಕಿ ಯಾರೂ ಬರದ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದ ಸಂಸದರು, ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಸಚಿವರನ್ನು ಭೇಟಿ ಮಾಡುತ್ತಿಲ್ಲ. ಅವರು ಇವರಿಗೆ ಸಮಯವೂ ಕೊಡುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೆ ಕೇಂದ್ರದಿಂದ ಒಂದು ಬಿಡಿಗಾಸೂ ಪರಿಹಾರ ಬಂದಿಲ್ಲ ಎಂದು ದೂರಿದರು.

ಕೇಂದ್ರ ಸರ್ಕಾರ ಬರದ ವಿಷಯವಾಗಿ ಯಾವ ಜವಾಬ್ದಾರಿಯನ್ನೂ ನಿಭಾಯಿಸಿಲ್ಲ. ಆದರೆ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಿದರೂ ಅದರ ವರದಿ ಕೊಟ್ಟಿದ್ದಾರೋ ಇಲ್ಲವೋ ಅದು ಗೊತ್ತಿಲ್ಲ ಎಂದು ಆರೋಪಿಸಿದರು.

ಬರ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿ. ಅಧಿಕಾರದಲ್ಲಿ ಯಾರೇ ಇದ್ದರೂ ತಕ್ಷಣ ರೈತರ ನೆರವಿಗೆ ಬರಬೇಕು. ಈ ವಿಷಯದಲ್ಲಿ ರಾಜ್ಯಕ್ಕಿಂತ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬಾರದು ಎಂದರು.

ಇಡೀ ರಾಜ್ಯ ತೀವ್ರ ಬರದಿಂದ ತತ್ತರಿಸಿದ್ದರಿಂದ ಈಗಾಗಲೇ ರಾಜ್ಯ ಸರಕಾರ ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಹೀಗಾಗಿ ಸರಕಾರ ಕುಡಿಯುವ ನೀರು ಸೇರಿದಂತೆ ಪ್ರತಿಯೊಂದಕ್ಕೂ ಜಿಲ್ಲಾಧಿಕಾರಿ ಪಿಡಿಒ ಖಾತೆಯಲ್ಲಿ ಹಣ ಠೇವಣಿ ಮಾಡಲಾಗಿದೆ ಎಂದರು.

ಇನ್ನೂ ಅಗತ್ಯ ಬಿದ್ದರೆ, ನೂರು ಕೋಟಿಯವರೆಗೆ ಹಣ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.