ನ್ಯಾಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದೆ. ಎಸ್‌ಐಆರ್ ಮೂಲಕ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಮೊಟಕುಗೊಳಿಸಲು ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡಿದೆ. ಅದಕ್ಕೆ ತಕ್ಕಂತೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಕೂಡ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನ್ಯಾಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವಿದೆ. ಎಸ್‌ಐಆರ್ ಮೂಲಕ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಮೊಟಕುಗೊಳಿಸಲು ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡಿದೆ. ಅದಕ್ಕೆ ತಕ್ಕಂತೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಕೂಡ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.

ನಗರದ ರಿಂಗ್ ರಸ್ತೆ ಮೂಲಕ ಚಿಕ್ಕಮಗಳೂರಿಗೆ ತೆರಳುವ ಮಾರ್ಗ ಮಧ್ಯೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿರುವ ಮತದಾನದ ಹಕ್ಕಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಲು ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಈ ವಿಚಾರವಾಗಿ ಹೋರಾಟ ಮುಂದುವರಿಸಲಾಗುವುದು ಎಂದರು. ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಎಸ್‌ಐಆರ್ ವಿಚಾರವಾಗಿ ಏನಾಗಿದೆ ಎಂಬುದು ದೇಶದ ಜನತೆಗೆ ಗೊತ್ತಿದೆ. ಈ ಸಂಬಂಧದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು. ಚುನಾವಣಾ ಆಯೋಗ ಅಕ್ರಮ ಎಸಗಿದೆ ಎಂದು ಆರೋಪಿಸಿದ ಖಂಡ್ರೆ, ಆಯುಕ್ತರು ಒಂದು ಪಕ್ಷದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್‌ನ ಗಂಭೀರ ಆರೋಪವಾಗಿದೆ. ಇಂತಹ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಆಯುಕ್ತರು ರಾಜೀನಾಮೆ ನೀಡಬೇಕು ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬಾಲ್ಕಿಯಲ್ಲಿ ೩,೨೦೦ ಮಂದಿ ಹೆಸರು ಅಳಿಸಲಾಗಿದೆತಮ್ಮ ಮತಕ್ಷೇತ್ರ ಬಾಲ್ಕಿಯಲ್ಲಿ ಎಸ್‌ಐಆರ್‌ ಬಳಿಕ ಸುಮಾರು ೩,೨೦೦ ಮಂದಿಯ ಹೆಸರುಗಳನ್ನು ಅಳಿಸಲಾಗಿದೆ ಎಂದು ಆರೋಪಿಸಿ ಸಂಬಂಧಪಟ್ಟವರು ಅಫಿಡವಿಟ್ ಸಲ್ಲಿಸಿದ್ದಾರೆ. ಜೀವಂತವಾಗಿರುವ ವ್ಯಕ್ತಿಗಳನ್ನು ಮೃತಪಟ್ಟವರು ಎಂದು ನಮೂದಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಫಾರಂ-೭ ಸಲ್ಲಿಸಿರುವ ಪ್ರಕರಣಗಳಿವೆ ಎಂದು ಖಂಡ್ರೆ ಹೇಳಿದರು.

ಜೀವಂತವಾಗಿರುವವರನ್ನೇ ಮೃತರೆಂದು ತೋರಿಸಿ ಹೆಸರು ಅಳಿಸುವ ಪ್ರಯತ್ನ ಮಾಡಿರುವವರು ಯಾರು? ಇದು ಅಪರಾಧವಲ್ಲವೇ? ಇಂತಹ ಪ್ರಕರಣಗಳ ಬಗ್ಗೆ ಎಫ್‌ಐಆರ್ ದಾಖಲಿಸಿದರೆ ಅದಕ್ಕೂ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ಹಿರಿಯ ಮುಖಂಡರು ‘ನಾವು ಮಾಡಿದ್ದೇ ಸತ್ಯ’ ಎಂಬ ರೀತಿಯಲ್ಲಿ ಈ ವಿಚಾರವನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇದು ಸಂಘಟಿತವಾಗಿ ನಡೆದಿರುವ ಅಪರಾಧವಾಗಿದ್ದರೆ, ಅದರಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಡಿಸೆಂಬರ್‌ ಒಳಗೆ ಜಿಪಂ, ತಾಪಂ ಚುನಾವಣೆರಾಜ್ಯದಲ್ಲಿ ಬಹುಕಾಲದಿಂದ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಡಿಸೆಂಬರ್ ಒಳಗಾಗಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಇತ್ತೀಚಿನ ವರದಿಗಳಲ್ಲಿಯೂ ವರ್ಷಾಂತ್ಯದೊಳಗೆ ಜಿಪಂ-ತಾಪಂ ಚುನಾವಣೆ ನಡೆಸುವ ಕುರಿತು ಸರ್ಕಾರದ ಸಿದ್ಧತೆಯ ಮಾಹಿತಿ ಹೊರಬಿದ್ದಿದೆ. ಮೊದಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಿ, ನಂತರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ಉದ್ದೇಶವಿದೆ. ನಾಳೆಯೇ ಚುನಾವಣೆ ಘೋಷಣೆಯಾದರೂ ಕಾಂಗ್ರೆಸ್ ಸಿದ್ಧವಿದೆ. ಸರ್ಕಾರಕ್ಕೆ ಚುನಾವಣೆಯಿಂದ ಯಾವುದೇ ಭಯವಿಲ್ಲ ಎಂದು ಹೇಳಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಿನ್ನೆಲೆ, ಅವುಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಸೇರಿದಂತೆ ಹಲವು ಸಿದ್ಧತೆಗಳು ಅಗತ್ಯವಾಗಿವೆ.

===========

ಬಾಕ್ಸ್‌ ನ್ಯೂಸ್‌: ‘ಕೆಪಿಎಸ್‌ಸಿ ಪರಿಸ್ಥಿತಿ ನೋವು ತಂದಿದೆ’

ಸರ್ಕಾರಿ ನೇಮಕಾತಿಯಲ್ಲಿ ಅಕ್ರಮ ಆರೋಪ ಹಾಗೂ ಸಾಹುಕಾರ್ ಶಿವಶಂಕರಪ್ಪ ಬಂಧನದ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ಈ ಬೆಳವಣಿಗೆ ಅತ್ಯಂತ ನೋವಿನ ಸಂಗತಿ ಎಂದರು.

ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿದ್ದಾರೆ. ಸರ್ಕಾರಿ ಹುದ್ದೆಗಳ ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ದುರದೃಷ್ಟವಶಾತ್ ಕೆಪಿಎಸ್‌ಸಿ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿರುವುದು ಆತಂಕಕಾರಿ. ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ರಾಜ್ಯದಲ್ಲಿ ಸುಮಾರು ೭೨ ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಕ್ರಮದಲ್ಲಿ ಯಾರು ಭಾಗಿಯಾಗಿದ್ದರೂ, ತಪ್ಪಿತಸ್ಥರ ವಿರುದ್ಧ ರಾಜ್ಯ ಹಾಗೂ ರಾಷ್ಟ್ರದ ಕಾನೂನಿನ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.