ನಿರುದ್ಯೋಗ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ

| Published : Feb 12 2024, 01:32 AM IST

ನಿರುದ್ಯೋಗ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ದೇಶ ಗಡಿ ಮತ್ತು ಗುಡಿಗಳಿಗೆ ಮಾತ್ರ ಸಿಮಿತವಾಗುತ್ತಿದೆ. ಧರ್ಮ ಧರ್ಮಗಳ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಗಲಭೆಗಳನ್ನು ಸೃಷ್ಠಿ ಮಾಡುತ್ತಿದ್ದು ಇದನ್ನು ಯುವಜನತೆ ತಿಳಿದುಕೊಂಡು ಎಚ್ಚರವಹಿಸಬೇಕು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಸಮಸ್ಯೆಯನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಬರೀ ಸುಳ್ಳು ಆಶ್ವಾಸನೆಗಳ ಮೂಲಕ ಯುವಕರ ದಾರಿ ತಪ್ಪಿಸುತ್ತಿದೆ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಡಿವೈಎಫ್ಐ 9ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುವುದರ ಬದಲು ವೇದಗಳು, ಉಪನಿಷತ್ತುಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದರು.

ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಮೊಟಕು

ಕೇಂದ್ರ ಸರ್ಕಾರದ ವಿರುದ್ದ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದು, ಪ್ರಶ್ನೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇತ್ತಿಚಿಗೆ ನಮ್ಮ ದೇಶ ಗಡಿ ಮತ್ತು ಗುಡಿಗಳಿಗೆ ಮಾತ್ರ ಸಿಮಿತವಾಗುತ್ತಿದೆ. ಧರ್ಮ ಧರ್ಮಗಳ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಗಲಭೆಗಳನ್ನು ಸೃಷ್ಠಿ ಮಾಡುತ್ತಿದ್ದು ಇದನ್ನು ಯುವಜನತೆ ತಿಳಿದುಕೊಂಡು ಎಚ್ಚರವಹಿಸಬೇಕು ಎಂದರು.

2024ರಲ್ಲಿ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ದೇಶದಲ್ಲಿ ಶಾಂತಿ, ನೆಮ್ಮದಿಯನ್ನು ಹುಡುಕಬೇಕಾಗುತ್ತದೆ. ಇದು ಪ್ರಧಾನಿ, ಅಂಬಾನಿ, ಅದಾನಿ ದೇಶ ಅಲ್ಲ ಪ್ರಜೆಗಳ ದೇಶ ಎಂಬುದು ಚುನಾವಣೆಯಲ್ಲಿ ಜನರು ಗಮನದಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದರು.

ಮಹಿಷಿ ವರದಿ ಜಾರಿಯಾಗಲಿ

ನಂತರ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ವಿ.ಅಂಬರೀಶ್ ಮಾತನಾಡಿ, ಉದ್ಯೋಗ ಸೃಷ್ಟಿಸಿ ಸ್ಥಳಿಯರಿಗೆ ಆದ್ಯತೆ ಒದಗಿಸಿ, ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆಗೆ ಒತ್ತಾಯಿಸಿ ೯ನೇ ಜಿಲ್ಲಾ ಸಮ್ಮೇಳನದ ಆಯೋಜಿಸಲಾಗಿದೆ, ದೇಶದಲ್ಲಿ ಯುವಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲ, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿ ಯುವ ಜನತೆಗೆ ತಪ್ಪು ದಾರಿಗಳನ್ನು ಹಿಡಿಯುತ್ತಿದ್ದಾರೆ ಇದಕ್ಕೆಲ್ಲ ಮೂಲ ಕಾರಣ ಕೇಂದ್ರ ಸರ್ಕಾರ, ಮುಂದಿನ ದಿನಗಳಲ್ಲಿ ಯುವ ಸಮೂಹದ ಸಮಸ್ಯೆಗಳ ಬಗೆಹರಿಸಲು ಬಲಿಷ್ಟ ಯುವಜನರ ಸಂಘಟನೆ ಕಟ್ಟಬೇಕಾಗಿದೆಂದು ತಿಳಿಸಿದರು.

ಬಳಿಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಪಿ.ರಾಮನಾಥ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರೇಸ್ ಸುಬ್ಬರಾಯಪ್ಪ ಮಾತನಾಡಿದರು. ಈ ವೇಳೆ ಡಿವೈಎಫ್ಐ ಜಿಲ್ಲಾಧ್ಯಕ್ಷ ರಮೇಶ್, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ, ಸಿಐಟಿಯು ಮುಖಂಡೆ ಭಾಗ್ಯಮ್ಮ, ಮುಖಂಡರಾದ ಆದಿನಾರಾಯಣಸ್ವಾಮಿ, ಶಿವಪ್ಪ, ದೇವರಾಜು, ಮುನಿವೆಂಕಟಪ್ಪ, ರಘುರಾಮರೆಡ್ಡಿ ಸೇರಿದಂತೆ ಇತರರು ಇದ್ದರು.