ಯಲ್ಲಮ್ಮಾ ದೇವಸ್ಥಾನಕ್ಕೆ ಅನುದಾನ ನೀಡಿದ್ದು ಕೇಂದ್ರ ಸರ್ಕಾರ

| Published : Aug 15 2025, 01:02 AM IST

ಸಾರಾಂಶ

ಯಲ್ಲಮ್ಮಾ ದೇವಸ್ಥಾನದ ೯೭ ಕೋಟಿ ಸೇರಿದಂತೆ ಒಟ್ಟು ೨೧೫ ಕೋಟಿಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ರೂಪುರೇಷೆ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹೧೧೮ ಕೋಟಿ ಅನುದಾನ ನೀಡಿದ್ದನ್ನು ಕೆಲವು ಜನಪ್ರತಿನಿಧಿಗಳು ಮರೆಮಾಚಿ, ರಾಜ್ಯ ಸರ್ಕಾರದ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ನರೇಂದ್ರ ಮೋದಿಯವರು ನಾಯಕತ್ವದಲ್ಲಿ ₹೧೦೦ ಕೋಟಿಯನ್ನು ಯಲ್ಲಮ್ಮಾ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ₹೧೮ ಕೋಟಿ ಪ್ರಸಾದ ಯೋಜನೆಯಡಿ ಅನುದಾನ ನೀಡಿದ್ದು, ಯಲ್ಲಮ್ಮಾ ದೇವಸ್ಥಾನದ ₹೯೭ ಕೋಟಿ ಸೇರಿದಂತೆ ಒಟ್ಟು ₹೨೧೫ ಕೋಟಿಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ರೂಪುರೇಷೆ ನಿರ್ಮಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಕೊಡುಗೆ ಏನೂ ಇಲ್ಲದಾಗಿದೆ ಎಂದು ತಿಳಿಸಿದರು.

ಗ್ಯಾರಂಟಿಗಳ ಒತ್ತಡದಲ್ಲಿ ರಾಜ್ಯದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲದಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಇವರು ಎಲ್ಲಿಂದ ದುಡ್ಡು ತರಲಿದ್ದಾರೆ ಎಂದರು. ರಾಜ್ಯ ಸರ್ಕಾರ ತಮ್ಮ ಆಡಳಿತದ ಕುರಿತು ಆತ್ಮಾವಲೋಕನ ಮಾಡಿಕೊಂಡು ಕೇಂದ್ರದ ಅನುದಾನ ಸದ್ಭಳಕೆ ಮಾಡಿಕೊಳ್ಳಲಿ ಎಂದರು. ಸವದತ್ತಿ ಭಾಗದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಬಹಳ ವರ್ಷಗಳಿಂದ ಬೇಡಿಕೆಯಿದೆ. ಲೋಕಾಪುರ, ರಾಮದುರ್ಗ, ಸವದತ್ತಿ, ಧಾರವಾಡ ರೈಲು ಮಾರ್ಗ ನಿರ್ಮಾಣದ ಮರು ಸರ್ವೇ ಕಾರ್ಯಕ್ಕೆ ಪೂರಕವಾದಂತ ಪ್ರತಿಕ್ರಿಯೆ ಬಂದಿದೆ. ಸದ್ಯದದಲ್ಲಿ ಈ ರೈಲು ಮಾರ್ಗದ ಸರ್ವೇ ಆರಂಭವಾಗಲಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ನಿತೀನ ಗಡಕರಿಯವರೊಂದಿಗೆ ರಸ್ತೆ ಅಭಿವೃದ್ಧಿ ಕುರಿತು ಸಮಾಲೋಚನೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿನ ೩ ರಾಜ್ಯ ಹೆದ್ದಾರಿಗಳನ್ನು ₹೧೭೭೨ ಕೋಟಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಮನವರಿಕೆ ಮಾಡಲಾಗಿದೆ. ಸಂಕೇಶ್ವರ, ಗೋಕಾಕ, ಯರಗಟ್ಟಿ, ಮುನವಳ್ಳಿ, ಸವದತ್ತಿಯಿಂದ ಧಾರವಾಡ ಸೇರುವ ರಸ್ತೆ ಮಾರ್ಗವನ್ನು ಚತುಷ್ಪತ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಲು ಲೋಕಸಭಾ ಸದಸ್ಯನಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಉಗರಗೋಳ ಗ್ರಾಪಂ ಸಂಬಂಧಿಸಿದ ೧೦೯೭ ಎಕರೆ ಜಾಗೆಯ ವಿವಾದವನ್ನು ಕೂಲಂಕಷವಾಗಿ ಎಲ್ಲರೊಂದಿಗೆ ಚರ್ಚಿಸಿ ಯಲ್ಲಮ್ಮಾ ದೇವಸ್ಥಾನದ ಅಭಿವೃದ್ದಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಸವದತ್ತಿ ತಾಲೂಕಿನ ಕಿಟದಾಳ ಗ್ರಾಮದ ಗೋಮಾಳ ಜಮೀನದಲ್ಲಿ ಸೋಲಾರ್‌ ಪ್ರೊಜೆಕ್ಟ್ ನಿರ್ಮಾಣ ಮಾಡಲಾಗುತ್ತಿರುವ ಮಾಹಿತಿ ನನಗೆ ಪೂರ್ಣವಾಗಿ ಗೊತ್ತಿಲ್ಲದಿರುವುದರಿಂದ ಅದರ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟವರಿಂದ ಪಡೆದು ಆ ಭಾಗದ ರೈತರ ಗೋಮಾಳ ಜಾಗೆಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಹಕಾರ ನೀಡುವುದಾಗಿ ಹೇಳಿದರು.

ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ, ಡಾ.ನಯನಾ ಭಸ್ಮೆ, ಪುರಸಭೆ ಸದಸ್ಯ ಅರ್ಜುನ ಅಮ್ಮೋಜಿ, ಸೌರವ ಚೋಪ್ರಾ, ಅಡಿವೆಪ್ಪಾ ಬೀಳಗಿ, ಈಶ್ವರ ಮೇಲಗೇರಿ, ಪುಂಡಲೀಕ ಮಾದರ, ರಾಜು ಲಮಾಣಿ ಮತ್ತು ಇತರರು ಉಪಸ್ಥಿತರಿದ್ದರು.