ಸಾರಾಂಶ
ಕೇಂದ್ರ ಸರ್ಕಾರವು ಆನ್‌ಲೈನ್ ಗೇಮ್ ನಿರ್ಬಂಧ ೨೦೨೫ರ ಕಾಯ್ದೆ ಅಡಿ ಜಾರಿಗೆ ತಂದಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿಯ ತನಕ ಆಗಿರುವ ಹಣಕಾಸಿನ ವ್ಯವಹಾರದ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ ಕೇಂದ್ರ ಸರ್ಕಾರವು ಆನ್‌ಲೈನ್ ಗೇಮ್ ನಿರ್ಬಂಧ ೨೦೨೫ರ ಕಾಯ್ದೆ ಅಡಿ ಜಾರಿಗೆ ತಂದಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿಯ ತನಕ ಆಗಿರುವ ಹಣಕಾಸಿನ ವ್ಯವಹಾರದ ಬಗ್ಗೆ ಸೂಕ್ತ ತನಿಖೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರಾದ್ಯಂತ ಸುಮಾರು ೫೦ ಕೋಟಿಗೂ ಹೆಚ್ಚು ಜನ ಇಂತಹ ಆನ್‌ಲೈನ್ ನಲ್ಲಿ ಹಣ ಇಟ್ಟು ಆಡುವ ಗೇಮ್‌ಗಳಿಗೆ ಬಲಿ ಆಗಿದ್ದು ಇದರ ಒಟ್ಟು ವ್ಯವಹಾರ ಸುಮಾರು ೨೫ ರಿಂದ ೩೦ ಸಾವಿರ ಕೋಟಿಗೂ ಮೀರುತ್ತದೆ ಎಂದರು.ಹಣ ಇಟ್ಟು ಆನ್‌ಲೈನ್ ಮುಖಾಂತರ ಆಟ ಆಡುವ ದುಶ್ಚಟಕ್ಕೆ ಬಲಿಯಾಗಿ ಸಾಕಷ್ಟು ಕುಟುಂಬಗಳು ಬೀದಿಪಾಲಾಗಿ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಆನ್‌ಲೈನ್ ಗೇಮ್‌ಗೆ ನಿರ್ಬಂಧ ೨೦೨೫ರ ಕಾಯ್ದೆ ಅಡಿ ಜಾರಿಗೆ ತಂದಿರುವುದು ಸರಿ. ಆದರೆ ಇಲ್ಲಿಯ ತನಕ ಆಗಿರುವ ಹಣಕಾಸಿನ ವ್ಯವಹಾರದ ಬಗ್ಗೆ ಸೂಕ್ತ ತನಿಖೆಯನ್ನು ಇಡಿ ಮುಖಾಂತರ ನಡೆಸಿ ಹಣ ಕಳೆದುಕೊಂಡಿರುವಂತಹ ಕುಟುಂಬಗಳಿಗೆ ನ್ಯಾಯ ಕೊಡಿಸುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು ಡಿಜಿಟಲ್ ಇಂಡಿಯಾ ಹಾಗೂ ಸೈಬರ್ ಇಲಾಖೆಯ ಮುಖಾಂತರ ದಾಖಲೆಗಳನ್ನು ಸಂಗ್ರಹಿಸಿ ಈ ಗೇಮ್ ನಿಂದಾಗಿ ನೊಂದಿರುವ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಹಾಯವಾಗುತ್ತದೆ. ಗೇಮ್ ಆಟ ಆಡುವುದಕ್ಕೆ ಹಣ ಪೂರೈಕೆ ಮಾಡಿರುವ ಜಾಲಗಳನ್ನು ಕೇಂದ್ರ ಸರ್ಕಾರ ಭೇದಿಸಬೇಕು. ಇಂತಹ ಆಟಗಳಿಗೆ ಜಾಹೀರಾತು ನೀಡಿ ಸಂಭಾವನೆ ಪಡೆದಿರುವ ಹೆಸರಾಂತ ವ್ಯಕ್ತಿಗಳನ್ನು ತನಿಖೆ ಒಳಪಡಿಸಿ ಅವರು ಪಡೆದಿರುವ ಸಂಭಾವನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.ಇಂತಹ ಗೇಮ್‌ಗಳು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ನಡೆದಿರುವ ವ್ಯವಹಾರವನ್ನೆಲ್ಲವನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು, ಕೇಂದ್ರ ಸರ್ಕಾರವೇ ಹೇಳುವಂತೆ ₹೨೦,೦೦೦ ಕೋಟಿ ವ್ಯವಹಾರ ಹಾಗೂ ₹೫೦ ಕೋಟಿಗೂ ಅಧಿಕ ಜನರ ಈ ಚಟಕ್ಕೆ ಬಲಿ ಆಗಿರುವುದು ಮೇಲ್ನೋಟಕ್ಕೆ ಕಂಡಿದ್ದರು ಒಳ ಅಂತರದಲ್ಲಿ ಸಾಕಷ್ಟು ಜನ ನೊಂದಿರುತ್ತಾರೆ ಮಾನ ಮತ್ತು ಮರ್ಯಾದೆ ಪ್ರಶ್ನೆಯಿಂದ ಯಾರು ಕೂಡ ಹೇಳಿಕೊಳ್ಳಲು ಆಗುತ್ತಿಲ್ಲ ಎಂದರು.ಸಾಲ ವಸೂಲಾತಿಯ ವಿಚಾರಗಳು ಸಿಬಿಲ್ ಸ್ಕೋರ್ ಕಡಿಮೆ ಎಂಬ ಮಾಹಿತಿ ಹಂಚಿಕೆ ಮಾಡಿ ಸಾಲದ ಹಣ ವಸೂಲಿ ಮಾಡುವ ಮೊದಲೇ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಿದರೆ ಉತ್ತಮ ಆಗ ಕೋಟ್ಯಂತರ ಪ್ರಕರಣಗಳು ಹೊರಕ್ಕೆ ಬರುತ್ತದೆ ಎಂದು ಒತ್ತಾಯಿಸಿದರು, ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ ತಾಲೂಕು ಅಧ್ಯಕ್ಷ ಸತೀಶ್ ಮಲೆಯೂರು , ಶ್ಯಾನಡ್ರಹಳ್ಳಿ ಬಸವರಾಜಪ್ಪ ಗುರುವಿನಪುರ ಮೋಹನ್ ಇದ್ದರು.