ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಜನಗಣತಿ ಜೊತೆಗೆ ಜಾತಿಗಣತಿ ನಡೆಸಲು ಕೇಂದ್ರ ಸರ್ಕಾರ ತಿರ್ಮಾನಿಸಿದ್ದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಅಭಿನಂದಿಸುತ್ತೇನೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದರು.ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ವೈಜ್ಞಾನಿಕ ಜಾತಿಗಣತಿ ನಡೆಸಲು ನಿರ್ಧರಿಸಿದ್ದು, ದೇಶದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಮತ್ತು ಭವಿಷ್ಯದ ಅನೇಕ ನಿರ್ಧಾರಗಳಿಗೆ ಇದು ಸಹಾಯಕವಾಗಿದೆ. ದೇಶದಲ್ಲಿ ಹಲವು ವರ್ಷಗಳಿಂದಿರುವ ಅಸಮತೋಲನ ಕಿತ್ತೆಸೆದು, ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ಬದ್ಧ ಸಮಾನ ಹಕ್ಕು ದೊರಕಿಸುವ ಮೂಲಕ ಸಶಕ್ತರನ್ನಾಗಿಸುವ ಕೇಂದ್ರದ ಈ ನಿರ್ಧಾರ ಇಡೀ ದೇಶದ ಜನರಿಗೆ ಖುಶಿಯನ್ನುಂಟು ಮಾಡಿದೆ. ಮಾತ್ರವಲ್ಲದೇ ಎಂಟನೂರು ವರ್ಷಗಳ ಹಿಂದೇ ಬಸವಣ್ಣನವರು ಜಾತಿ, ಲಿಂಗ ಭೇದ ಮಾಡದೆ ಸಮಸಮಾಜಕ್ಕಾಗಿ ಹೋರಾಡಿದ ಬಸವಣ್ಣ ಜಯಂತಿಯಂದು ಪ್ರಧಾನಿ ಮೋದಿಯವರು ಈ ನಿರ್ಣಯ ಕೈಗೊಂಡಿರುವುದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.
ಕಳೆದ 60 ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷ ಜಾತಿವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಮಾತ್ರವಲ್ಲದೇ ಜಾತಿ, ಉಪಜಾತಿಗಳ ಸಮೀಕ್ಷೆ ನೆಪದಲ್ಲಿ ಹಿಂದೂಗಳಲ್ಲಿ ಒಡಕು ಸೃಷ್ಟಿಸುವ ಮೂಲಕ ಕುತಂತ್ರ ಬುದ್ಧಿ ಪ್ರಯೋಗಿಸಿದೆ. 1881ರಲ್ಲಿ ಬ್ರಿಟಿಷರು ಜನಗಣತಿ ನೆಪದಲ್ಲಿ ಜಾತಿ ನಡೆಸಿ ನಮ್ಮ ನಮ್ಮೊಳಗೆ ಇದ್ದ ಒಗ್ಗಟ್ಟು ಮುರಿಯುವ ತಂತ್ರ ರೂಪಿಸಿದ್ದರು. ನಂತರ 1931ರಲ್ಲಿ ಮತ್ತೊಮ್ಮೆ ಜಾತಿಗಣತಿ ನಡೆಸುವ ಮೂಲಕ ಒಡೆದಾಳುವ ನೀತಿ ಅನುಸರಿಸಿ ಆಡಳಿತ ನಡೆಸಿದ್ದು ಇತಿಹಾಸ ಸಾಕ್ಷಿಯಾಗಿದೆ ಎಂದರು.ಕಾಂಗ್ರೆಸ್ ಪಕ್ಷ ಜಾತಿ ಆಧಾರಿತ ಗಣತಿ ಯಾವಾಗಲೂ ವಿರೋಧಿಸುತ್ತಲೆ ಬಂದಿದೆ. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗೆ ಒತ್ತು ನೀಡಿದರು. 2010ರಲ್ಲಿ ಡಾ.ಮನಮೋಹನಸಿಂಗ್ ಪ್ರಧಾನಿಯವರ ನೇತೃತ್ವದಲ್ಲಿ 2011ರಲ್ಲಿ ಜನಗಣತಿ ಜೊತೆಗೆ ಜಾತಿಗಣತಿ ನಡೆಸಲಾಗುವುದು ಎಂದು ತಿರ್ಮಾನಿಸಿ ಗಣತಿ ನಡೆಸಲಾಯಿತು. ಆದರೆ ಕಾಂಗ್ರೆಸ್ ಸರಕಾರ ಜಾತಿಯಾಧಾರಿತ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ದತ್ತಾಂಶ ಬಿಡುಗಡೆಗೊಳಿಸದೇ ಹಿಂದೂ ಸಮಾಜಕ್ಕೆ ಬಹುದೊಡ್ಡ ದ್ರೋಹ ಮಾಡಿತ್ತು. ಇತ್ತೀಚಿಗೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ಕಾಂಗ್ರೆಸ್ ಸರಕಾರ ಜಾತಿ ಸಮೀಕ್ಷೆ ನಡೆಸುವ ಹೆಸರಲ್ಲಿ ತಮ್ಮ ರಾಜಕೀಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮೀಕ್ಷೆ ನಡೆಸುವ ಮೂಲಕ ಅಲ್ಪ ಸಂಖ್ಯಾತರ ತುಷ್ಟೀಕರಣ ಹಾಗೂ ಹಿಂದೂ ಸಮಾಜಗಳನ್ನು ಒಡೆದು ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಅವೈಜ್ಞಾನಿಕ ಜಾತಿ ಸಮೀಕ್ಷೆಯಿಂದ ನಿಜವಾದ ಹಿಂದುಳಿದ ಸಮಾಜಗಳಿಗೆ ನ್ಯಾಯಕೊಡಲು ಸಾಧ್ಯವಿಲ್ಲ. ವೈಜ್ಞಾನಿಕ ಜಾತಿಗಣತಿಯಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ಆದರೇ ಇದನ್ನು ಕಾಂಗ್ರೇಸ್ ತಿರುಚಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆಂದರು. ಕಾಶ್ಮೀರದ ಪಲಹ್ಗಾಮ್‌ದಲ್ಲಿ ದಾಳಿಗೆ ಸಂಬಂಧಿಸಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯನವರು ಏನು? ಭಾರತದವರಾ ಪಾಕಿಸ್ತಾನಿಗಳಾ ಎಂಬ ಸಂಶಯ ವ್ಯಕ್ತವಾಗುವಂತೆ ಮಾಡಿದ್ದರು ಎಂದರು.ಕೇಂದ್ರ ಕೈಗೊಂಡಿರುವ ಜಾತಿಗಣತಿ ನಡೆಸುವ ತಿರ್ಮಾನಕ್ಕೆ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯನವರು ಸ್ವಾಗತಿಸಿದ್ದು ಒಳ್ಳೆಯ ವಿಚಾರ. ಆದರೆ ಮುಂದೆ ಈ ಕಾಂಗ್ರೆಸ್ ನಾಯಕರು ಯಾವ? ರೀತಿ ಬದಲಾಗುತ್ತಾರೆ ಎಂಬುವುದನ್ನು ಕಾದು ನೋಡಬೇಕು. ಸದಾ ಉಗ್ರರ ಅಟ್ಟಹಾಸದಿಂದ ಕಂಗೆಟ್ಟಿದ ಜಮ್ಮು ಕಾಶ್ಮೀರದಲ್ಲಿ ವಿಶೇಷ ಕಾಯ್ದೆ ತರುವ ಮೂಲಕ ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಲಾಗಿತ್ತು. ಆದ್ರೆ ಮೊನ್ನೆ ಅಚಾತುರ್ಯದಿಂದ ನಡೆದ ಉಗ್ರರ ದಾಳಿ ದೇಶದ ಜನಮನಕಲಕುವಂತಾಗಿದೆ. ಬಹುತೇಕ ಎಲ್ಲ ಮುಸ್ಲಿಮ ಬಾಂಧವರು ಕೂಡ ಈ ಉಗ್ರರ ಕೃತ್ಯ ಸಂಪೂರ್ಣ ವಿರೋಧಿಸಿದ್ದಾರೆ ಎಂದರು. ರಾಜ್ಯದಲ್ಲಿನ ಸಿಎಂ ಸೇರಿದಂತೆ ಸಚಿವ ಸಂತೋಷ ಲಾಡ್, ಬಿ.ಕೆ ಹರಿಪ್ರಸಾದ, ತಿಮ್ಮಾಪೂರ ಮಾತುಗಳನ್ನು ಮುಸ್ಲಿಮ ಬಾಂಧವರು ಕೇಳಬೇಡಿ. ಸದ್ಯದ ಕಾಂಗ್ರೆಸ್ ಪಕ್ಷ ಭಾರತದ್ದಲ್ಲ, ಪಾಕಿಸ್ತಾನ ಪಕ್ಷವಾಗಿದೆ ಎಂದರು. ಸಿಎಂ ಸಿದ್ದರಾಮಯ್ಯನವರಂತಹ ಹಿರಿಯರು ಹೇಳಿಕೆ ನೀಡುತ್ತಿರುವುದು ದೇಶದ್ರೋಹದ ಹೇಳಿಕೆಯಾಗುತ್ತದೆ ಎಂಬುವುದನ್ನು ಆಲೋಚಿಸಬೇಕು ಎಂದು ಹೇಳಿದರು.
ತಾಲೂಕು ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಮುನ್ನಾ ಧಣಿ ನಾಡಗೌಡ, ಹರೀಷ ನಾಟಿಕಾರ, ಶಂಕರಗೌಡ ಶಿವಣಗಿ, ಪ್ರಭು ಕಡಿ, ಪರುಶುರಾಮ ಮುರಾಳ, ಎಂ.ಆರ್.ಪಾಟೀಲ, ಸೋಮನಗೌಡ ಪಾಟೀಲ, ರಾಜು ಬಳ್ಳೋಳಿ, ಅಶೊಕ ಚಿನಿವಾರ, ಎಂ.ಆರ್ ಪಾಟೀಲ, ಹಣಮಂತ ನಲವಡೆ, ರಾಜಶೇಖರ ಹೊಳಿ, ಪುನಿತ ಹಿಪ್ಪರಗಿ, ಕಾವೇಋರಿ ಕಂಬಾರ, ಪ್ರಥಿ ಕಂಬಾರ, ಕೆಂಚಪ್ಪ ಬಿರಾದಾರ, ನಾಗರಾಜ ಕವಡಿಮಟ್ಟಿ, ಅಶೊಕ ರಾಠೋಡ, ಲಕ್ಷ್ಮಣ ಬಿಜ್ಜೂರ, ಸಂಜು ಬಾಗೇವಾಡಿ ಸೇರಿದಂತೆ ಹಲವರು ಇದ್ದರು.