ಕೇಂದ್ರ ಸರ್ಕಾರ ಉಗ್ರರ ಸೆದೆ ಬಡಿಯಲಿದೆ

| Published : Apr 24 2025, 12:01 AM IST

ಸಾರಾಂಶ

ಉಗ್ರರನ್ನು ಸೆದೆ ಬಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ನೆನಪಿಟ್ಟುಕೊಳ್ಳುವಂತೆ ಕ್ರಮ ಜರುಗಿಸಲಿದೆ ಎಂಬ ವಿಶ್ವಾಸವಿದೆ

ಕನ್ನಡಪ್ರಭ ವಾರ್ತೆ ಜಮಖಂಡಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿರುವ ದಾಳಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರ ತಕ್ಕ ಉತ್ತರ ನೀಡಲಿದೆ. ಉಗ್ರರನ್ನು ಸೆದೆ ಬಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ನೆನಪಿಟ್ಟುಕೊಳ್ಳುವಂತೆ ಕ್ರಮ ಜರುಗಿಸಲಿದೆ ಎಂಬ ವಿಶ್ವಾಸವಿದೆಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಹನುಮಾನ ಚೌಕ್‌ನಲ್ಲಿ ಬುಧವಾರ ಸಂಜೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯಿಂದ ಏರ್ಪಡಿಸಿದ್ದ ಮೌನ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಉಗ್ರಗಾಮಿಗಳು ಏಕಾಏಕಿಯಾಗಿ ಗುಂಡಿನ ದಾಳಿನಡೆಸಿ 28 ಜನರನ್ನು ಕೊಂದು ಹಾಕಿದ್ದು, ಮೃತರ ಪರಿವಾರವನ್ನು ಅನಾಥ ಮಾಡಿದ್ದು ಹೇಯ ಹಾಗೂ ಖಂಡನೀಯ ಕೃತ್ಯವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಭಾರತೀಯರು ಇದನ್ನು ಖಂಡಿಸಬೇಕು. ಉಗ್ರರನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಭಾರತೀಯ ಜನತಾ ಪಕ್ಷ ಮೃತರ ಕುಟುಂಬಗಳ ದುಃಖದಲ್ಲಿ ಭಾಗಿಯಾಗಲಿದೆ ಎಂದರು. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದರು.

ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಅತ್ಯಂತ ಹೇಯ ಮತ್ತು ಪೂರ್ವ ನಿಯೋಜಿತ ಕೃತ್ಯವಾಗಿದೆ. ಕೇಂದ್ರಸರ್ಕಾರ ಉಗ್ರರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲಿದೆ. ಅಮಾಯಕರು, ಪ್ರವಾಸಿಗರನ್ನು ಮನಸೋ ಇಚ್ಛೆ ಕೊಂದು ಹಾಕಿದ್ದು ಭೀಕರ ಕೃತ್ಯ ಇದನ್ನು ಸಮಾಜ ಎಂದಿಗೂ ಕ್ಷಮಿಸುವುದಿಲ್ಲ. ಮೃತರ ಪರಿವಾರದವರ ಶಾಪ ತಟ್ಟದೇ ಬಿಡುವುದಿಲ್ಲ ಎಂದು ಹೇಳಿದರು. ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲು ದಾನಗೌಡ, ಈಶ್ವರ ಆದೆಪ್ಪನವರ, ಗುರುಪಾದಪ್ಪ ಮೆಂಡಿಗೇರಿ, ವಿನಾಯಕ ಗೌಳಿ, ಶಂಕರ ಕಾಳೆ, ರಾಜಾಸಾಬ ಕಡಕೋಳ ಸೇರಿದಂತೆ ಹಲವರು ಸಭೆಯಲ್ಲಿದ್ದರು. 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.