ಜಾಹೀರಾತು ಪ್ರದರ್ಶನದಿಂದ ಸಾರಿಗೆ ಸಂಸ್ಥೆಗಳಿಗೆ ಆದಾಯ ಬರುತ್ತಿದೆ. ಆದರೆ, ಇತ್ತೀಚೆಗೆ ಸರ್ಕಾರಿ ಬಸ್‌ಗಳ ಮೇಲಿನ ಗುಟ್ಕಾ ಜಾಹಿರಾತುಗಳನ್ನು ಜನರು ಹರಿದು ಹಾಕಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರವೇ ದೇಶದಲ್ಲಿ ಗುಟ್ಕಾವನ್ನು ನಿಷೇಧ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ರಾಮನಗರ
ಜಾಹೀರಾತು ಪ್ರದರ್ಶನದಿಂದ ಸಾರಿಗೆ ಸಂಸ್ಥೆಗಳಿಗೆ ಆದಾಯ ಬರುತ್ತಿದೆ. ಆದರೆ, ಇತ್ತೀಚೆಗೆ ಸರ್ಕಾರಿ ಬಸ್‌ಗಳ ಮೇಲಿನ ಗುಟ್ಕಾ ಜಾಹಿರಾತುಗಳನ್ನು ಜನರು ಹರಿದು ಹಾಕಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರವೇ ದೇಶದಲ್ಲಿ ಗುಟ್ಕಾವನ್ನು ನಿಷೇಧ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.ಹುಬ್ಬಳ್ಳಿ-ಧಾರವಾಡದಲ್ಲಿ ಕೆಲವರು ಬಸ್‌ಗಳ ಮೇಲಿನ ಜಾಹೀರಾತು ಹರಿದು ಹಾಕಿರುವ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನ ಮಾಡುವುದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯುವ್ಯ ಸಾರಿಗೆಗೆ ಒಂದಷ್ಟು ಆದಾಯ ಬರುತ್ತಿದೆ. ಅದರಲ್ಲಿ ಬಿಎಂಟಿಸಿ ಒಂದಕ್ಕೆ ವರ್ಷಕ್ಕೆ ₹60 ಕೋಟಿ ಮೊತ್ತ ಬರುತ್ತಿದೆ. ಹೀಗಿರುವಾಗ ಗುಟ್ಕಾ ಜಾಹಿರಾತನ್ನು ಜನರು ಹರಿದು ಹಾಕಿದ್ದಾರೆ. ಆದರೆ, ನಾವು ಗುಟ್ಕಾ ನಿಷೇಧ ಮಾಡೋಕೆ ಹೋರಾಟ ಮಾಡಬೇಕಾ? ಅಥವಾ ಬಸ್ ಮೇಲಿನ ಸ್ಟಿಕ್ಕರ್ ಬಗ್ಗೆ ಹೋರಾಟ ಮಾಡಬೇಕಾ? ಎಂದು ಜನರನ್ನು ಪ್ರಶ್ನಿಸಿದ ಸಚಿವರು, ಕೇಂದ್ರವೇ ದೇಶದಲ್ಲಿ ಗುಟ್ಕಾ ನಿಷೇಧ ಮಾಡಲಿ. ಈ ಬಗ್ಗೆ ದೇಶವ್ಯಾಪ್ತಿ ತೀರ್ಮಾನ ತೆಗೆದುಕೊಳ್ಳಲಿ. ಜಾಹೀರಾತುಗಳ ಕುರಿತು ನಾವು ಗಮನಹರಿಸಿದ್ದು, ಇಡೀ ಬಸ್ ಪೂರ್ತಿ ಜಾಹಿರಾತು ಹಾಕುವಂತಿಲ್ಲ. ಬಸ್ಸಿನಲ್ಲಿ ಶೇ.40ರಷ್ಟು ಮಾತ್ರ ಜಾಹೀರಾತು ಹಾಕುವಂತೆ ಸೂಚಿದ್ದೇನೆ ಎಂದು ತಿಳಸಿದರು.
ಬೈಕ್ ಟ್ಯಾಕ್ಸಿಗೆ ಅನುಮತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾರ್ಯದರ್ಶಿಗಳು ಆದೇಶ ಕಾಪಿ ಪಡೆದು ಅಡ್ವಕೇಟ್ ಜನರಲ್ ಸಲಹೆ ಪಡೆದು ನನಗೆ ಕಡತ ಕಳುಹಿಸುತ್ತಾರೆ. ಮುಂದೆ ಏನು ಮಾಡಬೇಕು ಅಂತ ಚರ್ಚೆ ಮಾಡ್ತೇವೆ. ಅನುಮತಿ ಕೊಡುವುದಾದರೆ ಯಾವ ರೀತಿ ಕೊಡಬೇಕು ಅಂತ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.