ಸಾರಾಂಶ
ದೇಶದಲ್ಲಿ ಜನಗಣತಿ ಹಾಗೂ ಜಾತಿಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ವೈಜ್ಞಾನಿಕವಾಗಿ ನಡೆಸಬೇಕು ಎಂದು ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದಲ್ಲಿ ಜನಗಣತಿ ಹಾಗೂ ಜಾತಿಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ವೈಜ್ಞಾನಿಕವಾಗಿ ನಡೆಸಬೇಕು ಎಂದು ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ಎರಡನ್ನು ಒಟ್ಟಿಗೆ ನಡೆಸಲು ನಿರ್ಧರಿಸುವುದು ಸ್ವಾಗತಾರ್ಹ ವಿಷಯ. ಆದರೆ ಇದನ್ನು ವೈಜ್ಞಾನಿಕವಾಗಿ ನಡೆಸಬೇಕು. ಗಣತಿಗೆ ಬಂದಂತಹ ಸಂದರ್ಭದಲ್ಲಿ ಜನರು ಕೂಡ ವಾಸ್ತವ ಸಂಗತಿ ತಿಳಿಸಬೇಕೆಂದರು.
ಜನ ಗಣತಿ ಮತ್ತು ಜಾತಿ ಗಣತಿ ಕೇಂದ್ರ ಸರ್ಕಾರದ ಕೆಲಸವಾಗಿದೆ. ಹಾಗಾಗಿ ಇದಕ್ಕೆ ಪ್ರತ್ಯೇಕ ಸಚಿವಾಲಯ ತೆರೆಯಬೇಕು. ಪ್ರತಿ 10 ವರ್ಷಕ್ಕೊಮ್ಮೆ ತಪ್ಪದೆ ಜನ ಗಣತಿ ನಡೆಯಬೇಕು ಎಂದರು.ಜನ ಗಣತಿ ಕಾರ್ಯ ನಡೆಯದೆ ಸಾಕಷ್ಟು ಸಮಯ ಆಗಿದೆ. ಜನ ಗಣತಿಯದ್ದು ದೊಡ್ಡಪಟ್ಟಿಯಿದೆ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಗಣತಿ ಮಾಡಬೇಕು. ಸಮುದಾಯಗಳು ಜಾಗೃತಿಯಿಂದ ಜಾತಿ ಗಣತಿ ನಮೂದಿಸಬೇಕು. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಗಣತಿ ಆಗಬೇಕಿದೆ. ಅವೈಜ್ಞಾನಿಕವಾಗಿ ಗಣತಿ ಕಾರ್ಯ ನಡೆಯಬಾರದು. ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಜಾತಿ ಗಣತಿ, ಜನಗಣತಿ ಬಗ್ಗೆ ಜನರಿಗೆ ಅರಿವು ಮುಖ್ಯ. ಈ ನಿಟ್ಟಿನಲ್ಲಿ ಮಠಾಧೀಶರು ಜನರಲ್ಲಿ ಅರಿವು ಮೂಡಿಸಬೇಕಿದೆ. ನಮ್ಮ ನಮ್ಮ ಜಾತಿಗಳ ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ಇಲ್ಲದೆ ಹೋದರೆ ನಾವು ನಮ್ಮ ಸಮಾಜಕ್ಕೆ ಮೋಸ ಮಾಡಿದಂತಾಗುತ್ತದೆ. ಹಾಗಾಗಿ ಸಮೀಕ್ಷೆಗೆ ಬಂದಾಗ ಸರಿಯಾದ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದರು.ಗೋಷ್ಠಿಯಲ್ಲಿ ಜಯಣ್ಣ, ಆರಾಧ್ಯ, ಶಿವಣ್ಣ ಹಾಗೂ ಮೊಹಮ್ಮದ್ ಇಕ್ಬಾಲ್ ಇದ್ದರು.