ಸಾರಾಂಶ
ಯಲಬುರ್ಗಾ: ನಿವೃತ್ತ ಸರ್ಕಾರಿ ನೌಕರರ ಪಿಂಚಣಿ ಪರಿಷ್ಕರಿಸಲು ನಿರಾಕರಿಸಿದ ಕೇಂದ್ರ ಸರ್ಕಾರದ ನಿರ್ಣಯ ಖಂಡಿಸಿ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಗ್ರೇಡ್-೨ ತಹಸೀಲ್ದಾರ್ ವಿರೂಪಣ್ಣ ಹೊರಪೇಟಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕುರಿ ಮಾತನಾಡಿ, ಸರ್ಕಾರಿ ಸೇವೆಯಿಂದ ನೌಕರರು ನಿವೃತ್ತ ಹೊಂದಿದಾಗ ಅವರಿಗೆ ಹಳೆ ಪಿಂಚಣಿ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ. ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಲು ಸಾಧ್ಯವಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ನಿವೃತ್ತ ನೌಕರರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ. ಕೂಡಲೇ ಪಿಂಚಣಿ ಪರಿಷ್ಕರಿಸಿ ನಿವೃತ್ತ ನೌಕರರಿಗೆ ನೀಡಬೇಕೆಂದು ಒತ್ತಾಯಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನುಸಾ ರಾಯಬಾಗಿ ಮಾತನಾಡಿ, ಪಿಂಚಣಿ ರಚನೆಯಲ್ಲಿ ಪ್ರಮುಖ ಬದಲಾವಣೆ ತರುವ ಹಣಕಾಸು ಕಾಯಿದೆ-೨೦೨೫ನ್ನು ಸಂಸತ್ ಅನುಮೋದಿಸಿದೆ. ಹೊಸ ಕಾನೂನಿನ ಪ್ರಕಾರ, ಪಿಂಚಣಿದಾರರು ಇನ್ನು ಮುಂದೆ ಭವಿಷ್ಯದ ವೇತನ ಆಯೋಗದ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ ಎಂಬ ಕಾನೂನು ನಿವೃತ್ತ ನೌಕರರಿಗೆ ಅನ್ಯಾಯದ ಕ್ರಮವಾಗಿದೆ. ಕೂಡಲೇ ಪಿಂಚಣಿ ಪರಿಷ್ಕರಿಸಿ ನಿವೃತ್ತ ನೌಕರರಿಗೆ ಕೇಂದ್ರ ಸರ್ಕಾರ ಅನುಕೂಲ ಕಲ್ಪಿಸಬೇಕು. ಪಿಂಚಣಿ ನಮ್ಮ ಹಕ್ಕು. ಇದನ್ನು ಪಡೆಯಲು ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕು. ಕೇಂದ್ರ ಕೈಗೊಳ್ಳುವ ತೀರ್ಮಾನವನ್ನೇ ಮುಂದೆ ರಾಜ್ಯ ಸರ್ಕಾರವೂ ಅನುಸರಿಸಲಿದೆ. ಇದನ್ನು ನಿವೃತ್ತ ನೌಕರರು ಸಾಮೂಹಿಕ ಹೋರಾಟದಿಂದ ತಡೆಯುವುದು ಅನಿವಾರ್ಯವಾಗಿದೆ. ೨೦೨೬ರ ಏ. ೧ರ ನಂತರ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪರಿಷ್ಕರಿಸಿ ನೀಡಲಾಗುವುದು. ಅದಕ್ಕೂ ಮೊದಲು ನಿವೃತ್ತಿಯಾದವರಿಗೆ ಈ ಸೌಲಭ್ಯ ಇರುವುದಿಲ್ಲ ಎಂದು ೮ನೇ ಆಯೋಗದ ವರದಿಯಲ್ಲಿ ನಮೂದಿಸಲಾಗಿದೆ. ಇದು ಆತಂಕಕಾರಿ ಅಂಶವಾಗಿದೆ ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಎಂ.ಎನ್. ಜನಾದ್ರಿ, ರಾಮಣ್ಣ ತಳವಾರ, ಕೆ.ಎಂ. ಗಾಣಿಗೇರ, ಹೇಮಂತಪ್ಪ ಬಡಿಗೇರ, ಮಹಾದೇವಪ್ಪ ಕಮ್ಮಾರ, ಶರಣಪ್ಪ ಮಲಗ, ಬಸವರಾಜ ಅಡಿವೆಪ್ಪನವರ ಇದ್ದರು.