ಶೃಂಗೇರಿವರ್ಷವಿಡೀ ಸದಾ ನೀರಿನಿಂದ ತುಂಬಿರುವ ಪಟ್ಟಣದ ಹೊರವಲಯದ ಮಂಗಳೂರು ಶಿವಮೊಗ್ಗ ಸಂಪರ್ಕ ರಾ.ಹೆ. 169ರ ಭಕ್ತಪುರ ಕೆರೆ ಶತಮಾನಗಳ ಇತಿಹಾಸ ಹೊಂದಿರುವ ಅತ್ಯಂತ ಪ್ರಾಚೀನ ಕೆರೆಗಳಲ್ಲಿ ಒಂದಾದರೂ ದಶಕಗಳಿಂದ ಕಾಯಕಲ್ಪ ಕಾಣದೇ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಾ ಅಪಾಯದಂಚಿಗೆ ತಲುಪುತ್ತಿದೆ.

- ಕಾಯಕಲ್ಪವಿಲ್ಲದೇ ಹೂಳು, ಒತ್ತುವರಿಯಿಂದ ಮೂಲ ಸ್ವರೂಪಕ್ಕೆ ಧಕ್ಕೆ । ಎಕರೆಗಟ್ಟಲೇ ಇದ್ದ ಕೆರೆಯೀಗ ಗುಂಟೆಗಳಿಗೆ ಸೀಮಿತ

ಕನ್ನಡಪ್ರಭ ವಾರ್ತೆ ಶೃಂಗೇರಿ

ವರ್ಷವಿಡೀ ಸದಾ ನೀರಿನಿಂದ ತುಂಬಿರುವ ಪಟ್ಟಣದ ಹೊರವಲಯದ ಮಂಗಳೂರು ಶಿವಮೊಗ್ಗ ಸಂಪರ್ಕ ರಾ.ಹೆ. 169ರ ಭಕ್ತಪುರ ಕೆರೆ ಶತಮಾನಗಳ ಇತಿಹಾಸ ಹೊಂದಿರುವ ಅತ್ಯಂತ ಪ್ರಾಚೀನ ಕೆರೆಗಳಲ್ಲಿ ಒಂದಾದರೂ ದಶಕಗಳಿಂದ ಕಾಯಕಲ್ಪ ಕಾಣದೇ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಾ ಅಪಾಯದಂಚಿಗೆ ತಲುಪುತ್ತಿದೆ.

ಹಲವು ದಶಕಗಳಿಂದ ಈ ಕೆರೆ ಕಾಯಕಲ್ಪ ಕಾಣದೇ ಹೂಳು, ತ್ಯಾಜ್ಯ ತುಂಬಿರುವ ಜತೆಗೆ ಒತ್ತುವರಿಯಿಂದ ಎಕರೆಗಟ್ಟಲೇ ಇದ್ದ ಈ ಕೆರೆಯೀಗ ಗುಂಟೆಗಳಿಗೆ ಸೀಮಿತವಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.

ವಿದ್ಯಾಪರಣ್ಯಪುರ ಪಂಚಾಯಿತಿ ವ್ಯಾಪಿಯ ಈ ಕೆರೆ ದಾಖಲೆಗಳ ಪ್ರಕಾರ ಸುಮಾರು 2.42 ಎಕರೆ ವಿಸ್ತೀರ್ಣ ಹೊಂದಿದ್ದು ಮಳೆಗಾಲ, ಬೇಸಿಗೆ ಎನ್ನದೇ ಸದಾ ನೀರು ತುಂಬಿರುತ್ತದೆ. ಮಳೆಗಾಲದಲ್ಲಿ ಕೆರೆಯಲ್ಲಿ ನೀರು ತುಂಬಿ ಉಕ್ಕಿ ಹರಿಯುತ್ತದೆ. ಕಾಗೆ, ಬೆಳ್ಳಕ್ಕಿಗಳು ಸೇರಿದಂತೆ ಜಲಚರಗಳಿಗೆ ನೆಲಯಾಗಿದೆ. ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಕೆರೆಯ ಹೂಳೆತ್ತದೆ, ತ್ಯಾಜ್ಯವೇ ಸೇರಿರುವುದರಿಂದ ಉಪಯೋಗಕ್ಕೆ ಬಾರದಾಗಿದೆ. ಸುತ್ತಮುತ್ತ ಇರುವ ಗಿಡಮರಗಳಿಂದ ಸುಂದರ ಪರಿಸರ ಇದ್ದರೂ ತ್ಯಾಜ್ಯ ತುಂಬಿ ಉಪಯೋಗಕ್ಕೆ ಬಾರದಾಗಿದೆ.

ಮಳೆ ಕೊರೆತೆಯಿಂದ ಇತರ ಕೆರೆಗಳು ಬತ್ತಿ ಹೋದರೂ ಈ ಕೆರೆಯಲ್ಲಿ ಮಾತ್ರ ಸದಾ ನೀರು ತುಂಬಿರುತ್ತದೆ. ತ್ಯಾಜ್ಯಗಳಲ್ಲದೇ ರಸ್ತೆ ಮೇಲೆ ಹರಿಯುವ ಮಳೆ ನೀರು, ಚರಂಡಿ ನೀರು, ಮನೆಗಳ ಚರಂಡಿ ನೀರು ಎಲ್ಲವೂ ಈ ಕೆರೆಗೆ ಬಂದು ಸೇರುವುದೂ ದುರಂತವೇ ಸರಿ.

ಇಷ್ಟೆಲ್ಲಾ ಅವಜ್ಞೆಗೆ ಗುರಿಯಾದ ಕೆರೆಯ ಹೂಳನ್ನು ತೆಗೆದು ಸ್ವಚ್ಛಗೊಳಿಸಿದರೆ ಇಡೀ ಶೃಂಗೇರಿ ಪಟ್ಟಣಕ್ಕೆ ಸಾಕಾಗುವಷ್ಟು ನೀರು ದೊರೆಯುವುದರಲ್ಲಿ ಸಂದೇಹವಿಲ್ಲ. ಅಷ್ಟು ನೀರಿನ ಸಂಗ್ರಹ ಇಲ್ಲಿದೆ. ಈ ಕೆರೆ ದಡದಲ್ಲೇ ಪುರಾಣ ಪ್ರಸಿದ್ಧ ಚೌಡೇಶ್ವರಿ ದೇವಾಲಯವಿದೆ. ಇಂತಹ ಸುಂದರ, ಬಹುಪಯೋಗಿ ಕೆರೆಯ ಉಳಿವಿಗೆ ಹೂಳು, ತ್ಯಾಜ್ಯ ತೆಗೆದು ಒತ್ತುವರಿಯಿಂದ ಮುಕ್ತಗೊಳಿಸಲು ಆಗಬೇಕಾದ ಕೆಲಸಗಳ ಕಡೆ ನೀರಾವರಿ ಇಲಾಖೆ ಅಧಿಕಾರಿಗಳಾಗಲೀ, ಪಂಚಾಯಿತಿ ಆಡಳಿತವಾಗಲೀ ಗಮನವೇ ಹರಿಸುತ್ತಿಲ್ಲ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಇದಕ್ಕೆ ತಡೆಗೋಡೆಯ ಅಗತ್ಯವಿದ್ದರೂ ಈವರೆಗೂ ಇದನ್ನು ಗಮನಿಸುವವರೆ ಇಲ್ಲವಾಗಿದೆ. ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ನಿಯಂತ್ರಣ ತಪ್ಪಿದರೆ ಕೆರೆಗೆ ಬೀಳುತ್ತದೆ. ಹಲವು ದಶಕಗಳಿಂದ ಕೆರೆ ಹಂತಹಂತವಾಗಿ ದುಸ್ಥಿತಿಗೆ ತಲುಪುತ್ತಿದ್ದರೂ ಈ ಬಗ್ಗೆ ಸಂಬಂಧ ಪಟ್ಟವರು ಗಮನಿಸದೇ ಇರುವುದು ದುರಾದೃಷ್ಟ. ಇನ್ನಾದರೂ ಸಂಬಂಧಪಟ್ಟ ಇಲಾಖೆ,ಅಧಿಕಾರಿಗಳು ಈ ಕೆರೆಗೆ ಕಾಯಕಲ್ಪ ಒದಗಿಸಿ ಮೂಲಸ್ವರೂಪಕ್ಕೆ ತರಲು ಮುಂದಾಗಬೇಕಿದೆ. ತ್ಯಾಜ್ಯ ಮುಕ್ತ ಮಾಡಿ ಪರಿಸರ ಸ್ವಚ್ಛಗೊಳಿಸಿ ಕೆರೆಯ ಸುತ್ತಲು ಹಾಗೂ ಹಾಗೆಯೇ ರಸ್ತೆಯಂಚಿಗೆ ತಡೆಗೋಡೆ ನಿರ್ಮಿಸಲು ಮುಂದಾಗಬೇಕಿದೆ. ಕೆರೆಯನ್ನು ಮೂಲಸ್ವರೂಪಕ್ಕೆ ತಂದು ಕೆರೆಯ ಅಸ್ತಿತ್ವ ಉಳಿಸಬೇಕಿದೆ.

-- ಕೋಟ್‌--

ಅಂತರ್ಜಲ ಕೊರತೆಯಾಗುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಸದಾ ನೀರು ತುಂಬಿರುವ ಇಂತಹ ಪ್ರಾಚೀನ ಕೆರೆ ಮೂಲ ಸ್ವರೂಪಕಳೆದುಕೊಳ್ಳುತ್ತಿರುವುದು ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇದನ್ನು ಗಂಬೀರವಾಗಿ ಪರಿಗಣಿಸಿ ಅಗತ್ಯ ಕ್ರಮವಹಿಸಿ, ರಕ್ಷಿಸಲು ಮುಂದಾಗಬೇಕಿದೆ.

...ಅನಂತ್ ಶೃಂಗೇರಿ

-- ಕೋಟ್‌--

ಶೃಂಗೇರಿಯಂತಹ ಪವಿತ್ರ ಪುಣ್ಯಕ್ಷೇತ್ರದಲ್ಲಿ ಪ್ರಾಚೀನ ಭಕ್ತಂಪುರ ಕೆರೆ ಹಿಂದಿನಿಂದಲೂ ತನ್ನದೇ ಅಸ್ತಿತ್ವ ಉಳಿಸಿಕೊಂಡಿತ್ತು. ಎಕರೆಗಟ್ಟಲೇ ವಿಸ್ತೀರ್ಣದಿಂದ ವಿಶಾಲವಾಗಿತ್ತು. ಆದರೀಗ ಒಂದೆಡೆ ಹೂಳು, ಇನ್ನೊಂದೆಡೆ ಒತ್ತುವರಿಯಾಗುತ್ತಾ ಗುಂಟೆಗಳಿಗೆ ಸೀಮಿತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ಕೆರೆ ಮುಚ್ಚಿ ಹೋಗುವುದರಲ್ಲಿ ಸಂಶಯವಿಲ್ಲ. ಕಾಯಕಲ್ಪ ಅನಿವಾರ್ಯ.

--- ನಾಗೇಶ್ ಅಂಗಿರಸ

ಪ್ರಜಾಪ್ರಭುತ್ವ ಉಳಿಸಿ ವೇದಿಕೆ

--

15 ಶ್ರೀ ಚಿತ್ರ 1.ಶೃಂಗೇರಿ ಪಟ್ಟಣದ ಹೊರವಲಯದ ಭಕ್ಕಂಪುರ ಬಳಿ ಇರುವ ಭಕ್ತಂಪುರ ಕೆರೆ.

15 ಶ್ರೀ ಚಿತ್ರ 2,ಭಕ್ತಂಪುರ ಕೆರೆ ಹೂಳಿನಿಂದ ಕೂಡಿ ದಡವಾಗುತ್ತಿರುವುದು.