ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಯರನಾಳ, ಮುತ್ತಗಿ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಬುಧವಾರ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಯರನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ೨೦೨೩-೨೪ರಲ್ಲಿ ನಿರ್ಮಾಣಗೊಂಡಿರುವ ತೆರೆದ ಬಾವಿ ಕಾಮಗಾರಿಯನ್ನು ವೀಕ್ಷಿಸಿ ಕಾಮಗಾರಿಯ ಬಗ್ಗೆ ತೃಪ್ತಿವ್ಯಕ್ತಪಡಿಸಿ ಇದರ ಸದುಪಯೋಗವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕಟ್ಟಡ, ಮಕ್ಕಳ ಹಾಜರಾತಿ, ದಾಸ್ತಾನು ಸಂಗ್ರಹಣೆ ಕೋಣೆ, ಸುತ್ತ-ಮುತ್ತಲಿನ ಸ್ವಚ್ಛತೆ ವೀಕ್ಷಿಸಿದ ಅವರು, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಿಗೆ ಸೂಚಿಸಿದ ಅವರು ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿನ ಮಕ್ಕಳ ನೋಂದಣಿ, ಹಾಜರಾತಿ, ವಿಶಾಲ ಸ್ಥಳ ಹೊಂದಿರುವ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಂಥಾಲಯದಲ್ಲಿ ಕಂಪ್ಯೂಟರ್ ವ್ಯವಸ್ಥೆ, ಗ್ರಂಥಾಲಯ ಚಿತ್ರೀಕರಣ ಮತ್ತು ಗ್ರಂಥಾಲಯ ಸುತ್ತಲೂ ಆವರಣಗೋಡೆ ಕಾಮಗಾರಿ ಕೈಗೊಳ್ಳುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಾದರಿ ಗ್ರಂಥಾಲಯವಾಗುವಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬಸವನಬಾಗೇವಾಡಿಯ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಶಾಲಾ ಕಟ್ಟಡಗಳನ್ನು ವೀಕ್ಷಿಸಿದ ಅವರು ಹೊಸದಾಗಿ ಶಾಲಾ ಆವರಣದಲ್ಲಿನ ಕಟ್ಟಡಗಳಿಗೆ ಕಂಪ್ಯೂಟರ್ ಕೋಣೆ, ಪ್ರಯೋಗಾಲಯ ಮತ್ತು ಗ್ರಂಥಾಲಯ ಕೋಣೆಗಳಿಗೆ ಹೊಸ ವಿನ್ಯಾಸವನ್ನು ನೀಡಬೇಕೆಂದು ಜಿಪಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅವರಿಗೆ ಸೂಚಿಸಿದರು. ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಸೇವಾ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಿದ ಅವರು ಇದರ ಸುತ್ತಲೂ ಆವರಣ ಗೋಡೆ ನಿರ್ಮಾಣ ಮಾಡುವ ಜೊತೆಗೆ ಅನಗತ್ಯವಾಗಿ ತಿರುಗಾಡುವ ದಾರಿಯಲ್ಲಿ ಗೇಟ್ ನಿರ್ಮಾಣ ಮಾಡಬೇಕೆಂದು ಮುತ್ತಗಿ ಪಿಡಿಒ ಅವರಿಗೆ ಸೂಚಿಸಿದರು. ೨೦೧೯-೨೦ನೇ ಸಾಲಿನಲ್ಲಿ ನರೇಗಾ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರದ ಮುಂದಿನ ಸ್ಥಳದಲ್ಲಿ ಆವರಣಗೋಡೆ ಕಟ್ಟುವ ಮೂಲಕ ಕೇಂದ್ರದ ಜಾಗವನ್ನು ವಿಸ್ತರಿಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳನ್ನು ಮಾತನಾಡಿಸಿ ದಿನಿನಿತ್ಯ ನೀಡುವ ಆಹಾರದ ಬಗ್ಗೆ, ಆಟದ ಸಾಮಗ್ರಿ ಮತ್ತು ಪರಿಕರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಅಂಗನವಾಡಿ ಕೇಂದ್ರದಲ್ಲಿರುವ ಆಹಾರ ದಾಸ್ತಾನು ವೀಕ್ಷಿಸಿದರು. ಅಂಗನವಾಡಿ ಕೇಂದ್ರಕ್ಕೆ ಆವರಣ ಗೋಡೆ ನಿರ್ಮಾಣ ಕಾಮಗಾರಿ ಮಾಡಿಕೊಡುವಂತೆ ಪಿಡಿಒಗೆ ಸೂಚಿಸಿದರು. ಗ್ರಾಮದ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಬಿಸಿಯೂಟದ ಅಡುಗೆ ಕೋಣೆಯನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಧ್ಯಾಹ್ನ ತಯಾರಿಸಿದ ಬಿಸಿಯೂಟವನ್ನು ಸೇವಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟವನ್ನು ನಿತ್ಯವೂ ನೀಡಬೇಕೆಂದು ಶಾಲೆಯ ಮುಖ್ಯಗುರುಗಳಿಗೆ ಸೂಚಿಸಿದರು.ಶಾಲೆಯ ಆವರಣದಲ್ಲಿರುವ ಕೂಸಿನ ಮನೆಗೆ ಭೇಟಿ ನೀಡಿ ಕೂಸಿನ ಮನೆಯಲ್ಲಿನ ಮಕ್ಕಳಿಗೆ ನೀಡುತ್ತಿರುವ ಆಹಾರದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಮಕ್ಕಳಿಗೆ ಉತ್ತಮವಾದ ಆಹಾರ ನೀಡಬೇಕೆಂದು ಆರೈಕೆದಾರರಿಗೆ ಸೂಚಿಸಿದ ಅವರು ಪಿಡಿಒಗೆ ಕೂಸಿನ ಮನೆಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸೂಚಿಸಿದರು. ಸ್ಥಳದಲ್ಲಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಶಾಲಾ ಅಭಿವೃದ್ಧಿಗೆ ಮತ್ತು ಗ್ರಾಮ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ, ಕೊಲ್ಹಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಬಿ.ಗೊಂಗಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಿರ್ಮಲಾ ಸುರಪುರ, ತಾಪಂ ತಾಂತ್ರಿಕ ಸಂಯೋಜಕ ವಿಶ್ವನಾಥ ಪಟ್ಟಣಶೆಟ್ಟಿ, ಯರನಾಳ ಗ್ರಾಪಂ ಪಿಡಿಒ ರವಿ ಗುಂಡಳ್ಳಿ, ಮುತ್ತಗಿ ಗ್ರಾಪಂ ಪಿಡಿಒ ಬಸವರಾಜ ಬಡಿಗೇರ, ಮುತ್ತಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲಾ ಪಾಟೀಲ, ತಾಲೂಕು ಪಂಚಾಯತಿ ತಾಂತ್ರಿಕ ಸಹಾಯಕ ಅಸ್ಲಂ ಮಕನಾದರ, ತಾಲೂಕು ವಸತಿ ನೋಡಲ್ ಅಧಿಕಾರಿ ಎಸ್.ಬಿ.ಬಿರಾದಾರ, ಬಸವೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಡಿ.ಪಾಟೀಲ ಇತರರು ಇದ್ದರು.