ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಸವಾಲು

| Published : Nov 25 2024, 01:00 AM IST

ಸಾರಾಂಶ

ಸಾಮಾಜಿಕ ಬದ್ಧತೆಯುಳ್ಳ ಸಾಹಿತಿಗಳು ಎಂದು ಘೋಷಣೆ ಮಾಡಿಕೊಂಡ ಸಾಹಿತಿಗಳು ಈಗ ಎಲ್ಲಿದ್ದಾರೆ ? ಅವರು ಮಾಡಿದ ತಪ್ಪನ್ನು ನಾವು ಸರಿಯಾಗಿ ಅರಿತು ನಮ್ಮ ಸ್ಪಷ್ಟ ಹಾಗೂ ಪ್ರಾಮಾಣಿಕ ದಾರಿ ಶೋಧಿಸಬೇಕಾಗಿದೆ.

ಹುಬ್ಬಳ್ಳಿ:

ಇಂದಿನ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಬಂಧಿಯಾಗಿರುವ ನಾವೆಲ್ಲರೂ ಸಮಸ್ಯೆಯ ಬಗ್ಗೆ ಎಷ್ಟು ಬೇಕಾದರೂ ಮಾತನಾಡಬಹುದು. ಆದರೆ, ಅದಕ್ಕೆ ಬೇಕಾದ ಪರಿಹಾರ ಕಂಡುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿರುವುದು ವಿಪರ್ಯಾಸದ ಸಂಗತಿ ಎಂದು ವಿಮರ್ಶಕ, ಭಾಷಾ ಶಾಸ್ತ್ರಜ್ಞ ಡಾ. ರಂಗನಾಥ ಕಂಟನಕುಂಟೆ ಹೇಳಿದರು.

ಅವರು ಇಲ್ಲಿನ ಕಾಳಿದಾಸ ನಗರದಲ್ಲಿರುವ ನಾಗಸುಧೆ ಜಗಲಿಯಲ್ಲಿ ಜಿಲ್ಲಾ ಕಸಾಪ, ತಾಲೂಕು ಕಸಾಪ ಮತ್ತು ನಾಗಸುಧೆ ಜಗಲಿ ಆಶ್ರಯದಲ್ಲಿ ನಡೆದ ''''ನಾಗಸುಧೆ ದತ್ತಿ'''' ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕಾವ್ಯ ಮತ್ತು ಸಾಮಾಜಿಕ ಬದ್ಧತೆ ಕುರಿತು ಉಪನ್ಯಾಸ ನೀಡಿದರು.

ನಮ್ಮ ಪ್ರಜ್ಞೆ, ನಮ್ಮ ಆಲೋಚನೆಯ ಒಳಗಡೆಯೇ ಆಳವಾದ ದೌರ್ಬಲ್ಯವಿದೆ, ಬದ್ಧತೆಯೆಂಬುದು ಒಂದು ಪತ್ರಿಕೆಯ ಹೇಳಿಕೆಯೇ ಅಥವಾ ಅನುಸರಿಸಬೇಕಾದ ಮೌಲ್ಯವೇ? ಇದು ನಮ್ಮೆಲ್ಲ ಕವಿಗಳ ಮೂಲಭೂತ ಪ್ರಶ್ನೆಯಾಗಬೇಕು. ಸಾಮಾಜಿಕ ಬದ್ಧತೆಯುಳ್ಳ ಸಾಹಿತಿಗಳು ಎಂದು ಘೋಷಣೆ ಮಾಡಿಕೊಂಡ ಸಾಹಿತಿಗಳು ಈಗ ಎಲ್ಲಿದ್ದಾರೆ ? ಅವರು ಮಾಡಿದ ತಪ್ಪನ್ನು ನಾವು ಸರಿಯಾಗಿ ಅರಿತು ನಮ್ಮ ಸ್ಪಷ್ಟ ಹಾಗೂ ಪ್ರಾಮಾಣಿಕ ದಾರಿ ಶೋಧಿಸಬೇಕಾಗಿದೆ. ಈಗ ನಾವು ಬರೆಯುವುದೇ ಬೇರೆ, ಬದುಕುವುದೇ ಬೇರೆ ಎಂಬಂತಾಗಿದೆ. ಏನಾದರೂ ಬದ್ಧತೆಯಿಂದ ಮಾಡಲು ನಾಲ್ಕು ಜನ ಒಂದಾಗುವ ತೀವ್ರ ಒತ್ತಡ ಇಂದಿನದು ಎಂದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಮಹಾಂತಪ್ಪ ನಂದೂರ, ನಿರ್ಮಲಾ ಶೆಟ್ಟರ್, ರಂಜಾನ ಕಿಲ್ಲೇದಾರ, ಚಿದಾನಂದ ಕಮ್ಮಾರ, ಭಾಗ್ಯಜ್ಯೋತಿ ಗುಡಗೇರಿ, ತೇಜಾವತಿ ಎಚ್.ಡಿ. ಕವನ ವಾಚಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಕೆ.ಎಸ್. ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಅರುಣಕುಮಾರ ಹಬ್ಬು, ಗೋವಿಂದ ಹೆಗಡೆ, ಲಿಂಗರಾಜ ಧಾರವಾಡಶೆಟ್ಟರ್‌, ವೆಂಕಟೇಶ ಮರೆಗುದ್ದಿ, ಗಾಯತ್ರಿ ರವಿ ಮೊದಲಾದವರಿದ್ದರು. ಪ್ರಕಾಶ ಕಡಮೆ ಸ್ವಾಗತಿಸಿದರು. ಸುನಂದಾ ಕಡಮೆ ವಂದಿಸಿದರು, ವಿರುಪಾಕ್ಷ ಕಟ್ಟಿಮನಿ ನಿರೂಪಿಸಿದರು.