ಬಳ್ಳಾರಿ ಮಹಾನಗರಕ್ಕೆ ಕುಡಿವ ನೀರು ಪೂರೈಕೆಯ ಸವಾಲು!

| Published : Feb 13 2024, 12:52 AM IST

ಸಾರಾಂಶ

ನಗರದ ವಿವಿಧೆಡೆಗಳಲ್ಲಿ ನೀರು ಸಮರ್ಪಕವಾಗಿ ಬಿಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದು, ನೀರಿನ ಅಪವ್ಯಯ ನಿಯಂತ್ರಣವಾಗಬೇಕಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಬೇಸಿಗೆ ಶುರು ಮುನ್ನವೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಮಾರ್ಚ್ ತಿಂಗಳಿನಿಂದ ಮತ್ತಷ್ಟು ನೀರಿನ ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆ ಪಾಲಿಕೆ ಆಡಳಿತ ನೀರು ನಿರ್ವಹಣೆಗೆ ಮುತುವರ್ಜಿ ವಹಿಸುತ್ತಿರುವ ನಡುವೆಯೂ ಸಾರ್ವಜನಿಕರ ಅಸಹಕಾರ ಹಾಗೂ ನೀರಿನ ಅಸಮರ್ಪಕ ಬಳಕೆಯಿಂದ ಕುಡಿಯುವ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. ನಗರದ ವಿವಿಧ ಬಡಾವಣೆಗಳಲ್ಲಿ ಸದ್ಯ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನೀರು ಮಿತ ಬಳಕೆಗೆ ಕಡಿವಾಣ ಹಾಕದೇ ಹೋದಲ್ಲಿ ಬರುವ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದೆ.

ದಿನ ನಿಗದಿಯಿಲ್ಲ: ನಗರದ ವಿವಿಧ ವಾರ್ಡ್‌ಗಳಿಗೆ ನೀರು ಪೂರೈಕೆ ಸಮಯ ಹಾಗೂ ದಿನದ ನಿಗದಿಯಿಲ್ಲ. ಕೆಲವು ಪ್ರದೇಶಕ್ಕೆ ಆರೇಳು ದಿನಕ್ಕೊಮ್ಮೆ ನೀರು ಪೂರೈಸಿದರೆ, ಮತ್ತೆ ಕೆಲವೆಡೆ ಮೂರೇ ದಿನಕ್ಕೆ ನೀರು ಬಿಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಡ್ರಮ್‌ಗಳು, ಸಿಂಟೆಕ್ಸ್‌ಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ನೀರು ಪೂರೈಕೆಯಾಗುತ್ತಿದ್ದಂತೆ ಸಂಗ್ರಹಿದ ನೀರು ಹೊರಚೆಲ್ಲಿ ಹೊಸನೀರು ಸಂಗ್ರಹಿಸುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತಿದೆ.

ಬರುವ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗಲಿದೆ ಎಂದು ಗೊತ್ತಿದ್ದೂ ಕಾರುಗಳು, ದ್ವಿಚಕ್ರ ವಾಹನಗಳನ್ನು ತೊಳೆದು ನೀರು ಪೋಲು ಮಾಡುವವರ ಪ್ರಮಾಣದ ನಗರದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಕಾಲುವೆ ನೀರು ಬಂದ್‌; ಹೆಚ್ಚಿದ ಆತಂಕ: ಪ್ರಾದೇಶಿಕ ಆಯುಕ್ತರ ಆದೇಶದಂತೆ ತುಂಗಭದ್ರಾ ಕಾಲುವೆಯಿಂದ ಏಪ್ರಿಲ್ ಅಂತ್ಯದವರೆಗೆ ಪ್ರತಿ ತಿಂಗಳು 10 ದಿನಕ್ಕೊಮ್ಮೆ ಆನ್ ಆ್ಯಂಡ್ ಆಫ್ ಮಾದರಿಯಲ್ಲಿ ನೀರು ಕೊಡಬೇಕಿದೆ. ಆದರೆ, ಕಳೆದ ಫೆ. 1ರಂದೇ ಜಲಾಶಯದ ಎರಡು ಕಾಲುವೆಗಳಿಗೆ (ಎಚ್‌ಎಲ್‌ಸಿ-ಎಲ್‌ಎಲ್‌ಸಿ) ನೀರು ಸ್ಥಗಿತಗೊಳಿಸಲಾಗಿದೆ.

ಕಾಲುವೆಗೆ ನೀರು ಪೂರೈಕೆ ಮಾಡುವಂತೆ ತುಂಗಭದ್ರಾ ಬೋರ್ಡ್‌ಗೆ ಮನವಿ ಮಾಡಿಕೊಳ್ಳಲಾಗಿತ್ತು. ಕಾಲುವೆ ನೀರಿಗಾಗಿ ಎದುರು ನೋಡುತ್ತಿದ್ದೇವೆ ಎನ್ನುವ ಪಾಲಿಕೆ ಅಧಿಕಾರಿಗಳು, ಸದ್ಯ ಸಂಗ್ರಹದಲ್ಲಿರುವ ನೀರಿನ ಪ್ರಮಾಣದಲ್ಲಿ ನಗರಕ್ಕೆ ನಾಲ್ಕೈದು ದಿನಕ್ಕೊಮ್ಮೆ ನೀರು ಪೂರೈಸಬಹುದು. ಆದರೆ, ಮಾರ್ಚ್ ಅಂತ್ಯ ಹಾಗೂ ಏಪ್ರಿಲ್‌ನಿಂದ ನಗರಕ್ಕೆ ನೀರು ಪೂರೈಕೆಯ ಸವಾಲು ಎದುರಾಗಲಿದೆ. ಜುಲೈ ಅಂತ್ಯದವರೆ ನೀರು ಸರಬರಾಜಿನ ಸವಾಲು ಹೆಚ್ಚಿರುತ್ತದೆ ಎನ್ನುತ್ತಾರೆ.ನೀರಿನ ಅಪವ್ಯಯ ನಿಯಂತ್ರಣವಾಗಲಿ

ಬಳ್ಳಾರಿ ಮಹಾನಗರಕ್ಕೆ ನೀರು ಪೂರೈಸುವ ಅಲ್ಲೀಪುರ ಕೆರೆಯ 7.5 ಮೀಟರ್ ನೀರಿನ ಸಾಮರ್ಥ್ಯದ ಪೈಕಿ ಸದ್ಯ 5.5 ಮೀಟರ್‌ನಷ್ಟು ಮಾತ್ರ ನೀರಿದೆ.

ಇನ್ನು ಮೋಕಾ ಶಿವಪುರ ಕೆರೆಯಲ್ಲಿ ಸಹ ನೀರಿನ ಸಂಗ್ರಹ ಇಳಿಕೆಯಾಗಿದೆ. 1846 ಎಂಎಲ್‌ಡಿ ಸಾಮರ್ಥ್ಯದ ಈ ಕೆರೆಯಲ್ಲಿ 1492 ಎಂಎಲ್‌ಡಿ ನೀರಿದೆ. ಕಾಲುವೆಗೆ ನೀರು ಬಂದಲ್ಲಿ ಮಾತ್ರ ನೀರಿನ ಸಂಗ್ರಹ ಹೆಚ್ಚಾಗಲಿದೆ. ಇಲ್ಲದೇ ಹೋದರೆ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.

ನಗರದ ವಿವಿಧೆಡೆಗಳಲ್ಲಿ ನೀರು ಸಮರ್ಪಕವಾಗಿ ಬಿಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದು, ನೀರಿನ ಅಪವ್ಯಯ ನಿಯಂತ್ರಣವಾಗಬೇಕಿದೆ.

ಸಮಸ್ಯೆ ಉಲ್ಬಣ ಸಾಧ್ಯತೆ: ಸದ್ಯ ಬಳ್ಳಾರಿ ನಗರಕ್ಕೆ ನಾಲ್ಕೈದು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿದ್ದೇವೆ. ನೀರಿನ ಕೊರತೆ ಎದುರಾಗದಂತೆ ನಿರ್ವಹಣೆ ಮಾಡಬೇಕಾಗಿದೆ. ಸಾರ್ವಜನಿಕರು ನೀರು ಪೋಲಾಗದಂತೆ ಮಿತವಾಗಿ ಬಳಸುವ ಕಾಳಜಿ ತೋರಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಪಾಲಿಕೆ ಆಯುಕ್ತ ಜಿ. ಖಲೀಲ್ ಸಾಬ್ ತಿಳಿಸಿದರು.

ವೈಜ್ಞಾನಿಕ ಕ್ರಮ: ಪಾಲಿಕೆಯವರು ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಐದಾರು ತಾಸು ನೀರು ಬಿಟ್ಟರೆ, ಕೆಲವೆಡೆ ಒಂದೇ ತಾಸಿಗೆ ಬಂದ್ ಮಾಡುತ್ತಾರೆ. ಪಾಲಿಕೆಯ ಅಧಿಕಾರಿಗಳು ನೀರು ಪೂರೈಕೆಯ ಬಗ್ಗೆ ವೈಜ್ಞಾನಿಕ ಕ್ರಮ ವಹಿಸಬೇಕು ಎಂದು ಬಳ್ಳಾರಿಯ ಸರ್‌ ಎಂ.ವಿ. ನಗರದ ನಿವಾಸಿ ಮಾತಂಗಪ್ಪ ಅವರ ಆಗ್ರಹ.