ಸ್ವಾ- ಅನುಭವದೊಂದಿಗೆ ಕಲ್ಪನೆಯನ್ನೂ ಬೆರೆಸಿ ಬರೆಯುವುದು ಲೇಖಕನಿಗೆ ಸವಾಲು. ವಾಸ್ತವಕ್ಕೆ ಹತ್ತಿರವಿರುವ ಬರಹ ಓದುಗರನ್ನು ಸೆಳೆಯುತ್ತದೆ ಹಾಗೂ ಚಿಂತನೆಗೂ ಈಡುಮಾಡುತ್ತದೆ. ಅಂತಹ ಬರಹಗಳು ಹೆಚ್ಚು ಹೊರಬರಲಿ ಎಂದು ಕವಿ ಹಾಗೂ ವಿಮರ್ಶಕ ಡಾ.ರಾಮಲಿಂಗಪ್ಪ ಟಿ.ಬೇಗೂರು ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುಸ್ವಾ- ಅನುಭವದೊಂದಿಗೆ ಕಲ್ಪನೆಯನ್ನೂ ಬೆರೆಸಿ ಬರೆಯುವುದು ಲೇಖಕನಿಗೆ ಸವಾಲು. ವಾಸ್ತವಕ್ಕೆ ಹತ್ತಿರವಿರುವ ಬರಹ ಓದುಗರನ್ನು ಸೆಳೆಯುತ್ತದೆ ಹಾಗೂ ಚಿಂತನೆಗೂ ಈಡುಮಾಡುತ್ತದೆ. ಅಂತಹ ಬರಹಗಳು ಹೆಚ್ಚು ಹೊರಬರಲಿ ಎಂದು ಕವಿ ಹಾಗೂ ವಿಮರ್ಶಕ ಡಾ.ರಾಮಲಿಂಗಪ್ಪ ಟಿ.ಬೇಗೂರು ಹೇಳಿದರು. ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಹಿರಿಯ ಲೇಖಕ ಎಂ.ಎನ್.ಕೃಷ್ಣಾಚಾರ್ ವಿರಚಿತ ತೆಪ್ಪೋತ್ಸವ ಕಾದಂಬರಿಯನ್ನು ಜನಾರ್ಪಣೆ ಮಾಡಿ ಮಾತನಾಡಿದರು. ಸಾಮಾಜಿಕ ವಾಸ್ತವದ ಜೊತೆಗೆ ಕಲ್ಪನೆಯನ್ನೂ ಬೆರೆಸಿ ಕೃಷ್ಣಾಚಾರ್ ಅವರು ಈ ಕಾದಂಬರಿ ರಚಿಸಿದ್ದು, ಬದಲಾಗುತ್ತಿರುವ ಸಬಂಧಗಳು, ಸಾಮಾಜಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿ ಅರ್ಥವತ್ತಾಗಿ ಕಟ್ಟಿದ್ದಾರೆ ಎಂದು ಹೇಳಿದರು.ಕುವೆಂಪು, ಬೇಂದ್ರೆ, ಕಾರಂತರನ್ನು ಓದಿದರೆ ವಿಚಾರ ಪ್ರಜ್ಞೆ, ವೈಜ್ಞಾನಿಕ ಬುದ್ಧಿ ಬೆಳೆದಿರುತ್ತದೆ. ಅಂತಹ ಚಿಂತನೆಗಳು ಈ ಕಾದಂಬರಿಯಲ್ಲಿ ಕಾಣುತ್ತವೆ. ಸಂಪ್ರದಾಯದ ಜೊತೆ ಬೆಸೆದುಕೊಳ್ಳುವ ಈ ಕೃತಿಯಲ್ಲಿ ಸಮಾಜದಲ್ಲಿನ ಇಬ್ಬಂದಿತನ, ಶೋಷಣೆರಹಿತ ಮಾದರಿ ಸಮಾಜ ವ್ಯವಸ್ಥೆಯ ಸ್ಥಾಪನೆಯ ಆಶಯವೂ ಎದ್ದುಕಾಣುತ್ತದೆ. ಕನ್ನಡ ಸಾಹಿತ್ಯಕ್ಕೆ ಈ ಕಾದಂಬರಿ ಮಹತ್ವದ ಕೊಡುಗೆಯಾಗಿದೆ ಎಂದು ಡಾ.ರಾಮಲಿಂಗಪ್ಪ ಹೇಳಿದರು.ಕವಿ, ವಿಮರ್ಶಕ ಡಾ.ರವಿಕುಮಾರ್ ನೀಹ ಅವರು ಕೃತಿ ಕುರಿತು ಮಾತನಾಡಿ, ಕಾದಂಬರಿಕಾರ ಕೃಷ್ಣಾಚಾರ್ ಅವರು ತಮ್ಮ ಹೋರಾಟದ ಕಡೆಯಿಂದ ಕೃತಿ ರಚನೆ ಮಾಡಿದಂತಿದ್ದು, ಒಂದುರೀತಿಯಲ್ಲಿ ಆತ್ಮಚರಿತ್ರೆಯಂತಿದೆ. ಜೀವನವನ್ನು ಕೂಡಿಸುವ, ತೇಲಿಸುವ ತೆಪ್ಪ ಎಂಬುದು ಇಲ್ಲಿ ರೂಪಕವಾಗಿದೆ ಎಂದರು. ಊರಿನೊಟ್ಟಿಗಿನ ಸಂಬAಧದ ಜೊತೆಗೆ ವೈಯಕ್ತಿಕ ಸಂಬಂಧವನ್ನು ಕಾದಂಬರಿ ಕಟ್ಟಿಕೊಡುತ್ತದೆ. ಬರವಣಿಗೆಯಲ್ಲಿ ಓದಿಸಿಕೊಂಡುಹೋಗುವ ಕೌಶಲ್ಯವಿದೆ. ಇದು ಹಳ್ಳಿಯ ಸಂಬಂಧಗಳನ್ನು ಹೇಳುವ ಓದುಗರ ಕಾದಂಬರಿ ಎಂದು ಹೇಳಿದರು.ಲೇಖಕಿ ಡಾ.ಆಶಾ ಬಗ್ಗನಡು ಅವರು, ಹಿಂದೆ ಹಳ್ಳಿಗಳಲ್ಲಿ ಜಾತ್ಯತೀತ ಸಂಬಂಧವಿತ್ತು. ಇವತ್ತಿನ ರಾಜಕೀಯ ಕುತಂತ್ರದಿಂದ ಹಳ್ಳಿಗಳ ಆಗಿನ ಸೌಹಾರ್ದ ಸಂಬಂಧ ಹಾಳಾಗುತ್ತಿದೆ. ಈ ಬದಲಾವಣೆಯನ್ನು ಕಾದಂಬರಿಯ ಪಾತ್ರಗಳ ವರ್ತನೆಗಳ ಮೂಲಕ ಹೇಳಲಾಗಿದೆ. ಇಲ್ಲಿ ಕೆಲವು ನಿಜಜೀವನದ ಪಾತ್ರಗಳಿವೆ. ಪರಸ್ಪರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ, ಜಾತಿಧರ್ಮದ ಬೇಧವಿಲ್ಲದೆ ಸಹಬಾಳ್ವೆಯಿಂದ ಬದುಕುತ್ತಿದ್ದ ಹಳ್ಳಿಯ ಬದುಕಿನ ಬದಲಾವಣೆಯನ್ನು ಹೇಳಿದ್ದಾರೆ ಎಂದರು.ಕಾದಂಬರಿಕಾರ ಎಂ.ಎನ್.ಕೃಷ್ಣಾಚಾರ್ ಮಾತನಾಡಿ, ತಾವು ನೋಡಿದ, ಅನುಭವಿಸಿದ ಒಂದಷ್ಟು ಕಲ್ಪನೆ ಪಾತ್ರಗಳು, ಸನ್ನಿವೇಶ ಒಳಗೊಂಡು ಕಾದಂಬರಿ ರಚಿಸಲಾಗಿದೆ. ಬದಲಾಗುತ್ತಿರುವ ಗ್ರಾಮೀಣ ಜೀವನದ ಚಿತ್ರಣ ಕಟ್ಟಿಕೊಡುವ ಪ್ರಯತ್ನವಾಗಿದೆ ಎಂದ ಅವರು, ಬದಲಾವಣೆಯ ಪರ್ವದಲ್ಲಿ ಪುಸ್ತಕ ಓದುವ ಹವ್ಯಾಸವೂ ಕಡಿಮೆಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಶುಭ ಕೋರಿದರು. ನಿವೃತ್ತ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು, ನಗರಪಾಲಿಕೆಯ ಮುಖ್ಯ ಹಣಕಾಸು ಅಧಿಕಾರಿ ಆರ್.ರೇವಣ್ಣ, ಎಸ್.ವಿ.ಕೆ. ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎ.ಸತ್ಯನಾರಾಯಣ, ಅಭಯಾಂಜನೇಯಸ್ವಾಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎ.ವೆಂಕಟೇಶ್, ಲೇಖಕರೂ ನಿವೃತ್ತ ಪ್ರಾಂಶುಪಾಲರಾದ ಎಂ.ಎಚ್.ನಾಗರಾಜು, ಕೆ.ವಿ.ಕೃಷ್ಣಮೂರ್ತಿ, ವಿಮರ್ಶಕ ಡಾ.ಕೆ.ವಿ.ಮುದ್ದುವೀರಪ್ಪ, ಕನ್ನಡ ಉಪನ್ಯಾಸಕಿ ಲತಾ ಮೊದಲಾದವರು ಭಾಗವಹಿಸಿದ್ದರು.