ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಬುದ್ಧಮಾಂದ್ಯ ಮತ್ತು ಅಂಗವಿಕಲ ಮಕ್ಕಳ ಪಾಲನೆ, ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದ್ದು ನರಸಿಂಹರಾಜಪುರದ ಸ್ಪೆಷಲ್ ಎಜುಕೇಷನ್ ಆಡಳಿತ ಮಂಡಳಿಯವರು ಇಂತಹ ಸೇವಾಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕೇರಳ ಮಾನಂದವಾಡಿಯ ಪಾಧರ್ ಜೋಸ್ ಮುರಿಕ್ಕನ್ ಮೆಚ್ಚುಗೆ ವ್ಯಕ್ತಪಡಿಸಿದರು.ಅವರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದ ಸಮೀಪವಿರುವ ಸೇಂಟ್ ನೋಬರ್ಟ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಅಂಗವಿಕಲ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಶಿಕ್ಷಣದ ಜತೆಗೆ ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು ಕೇರ್ ಕರ್ನಾಟಕ ಫೌಂಡೇಶನ್ ಸದಸ್ಯರು ಸಹ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಸಂಸ್ಥೆಯಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಂಬ ಬೇಧ-ಭಾವ ಮಾಡದೆ ಎಲ್ಲಾ ಧರ್ಮದ ಮಕ್ಕಳಿಗೂ ಮಾನವೀಯತೆಯ ಆಧಾರದ ಮೇಲೆ ಶಿಕ್ಷಣ ಒದಗಿಸಲಾಗುತ್ತಿದ್ದಾರೆ ಎಂದರು. ನರಸಿಂಹರಾಜಪುರದ ಸೇಂಟ್ ನೋಬರ್ಟ್ ಸ್ಪೆಷಲ್ ಎಜುಕೇಶನ್ ಸ್ಕೂಲಿನ ನಿರ್ದೇಶಕ ರೆ.ಫಾ.ಜೋಯಿಯಲ್ ವಡೆಕ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, 2008ರಿಂದ ಈ ವಿಶೇಷ ಮಕ್ಕಳ ಶಾಲೆಯನ್ನು ಪ್ರಾರಂಭಿಸಿದ್ದೇವೆ. ಕಳೆದ 15 ವರ್ಷದಿಂದ ಪೋಷಕರ, ಸಿಬ್ಬಂದಿಗಳ, ಶಿಕ್ಷಕರ ಸಹಕಾರದೊಂದಿಗೆ ವಿಶೇಷ ವಿಕಲ ಚೇತನ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಈ ವಿಕಲಚೇತನ ಮಕ್ಕಳು ದೇವರ ಮಕ್ಕಳಂತೆ ಇದ್ದು ಇವರಿಗೆ ವಿಶೇಷ ಬುದ್ಧಿವಂತಿಕೆ ಇದೆ.2012 ರಿಂದ ನೆದರ್ ಲ್ಯಾಂಡ್ ದೇಶದಿಂದ ಮಾನಸಿಕ ತಜ್ಞ ವೈದ್ಯ ಡಾ.ಕೀಸ್ ವಿಟ್ ಆಗಮಿಸಿ ಉಚಿತವಾಗಿ ಇಲ್ಲಿನ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ನಮ್ಮ ಶಾಲೆಗೆ ಉತ್ತಮ ವಿಶೇಷ ಶಾಲೆ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ನೆದರ್ ಲ್ಯಾಂಡ್ ನ ಮಾನಸಿಕ ತಜ್ಞ ಡಾ.ಕೀಸ್ ಡಿ ವಿಟ್ ಮಾತನಾಡಿ, 2011ರಲ್ಲಿ ಇಲ್ಲಿನ ಸೋಷಿಯಲ್ ವೆಲ್ ಫೇರ್ ಸೊಸೈಟಿಗೆ ನಾನು ಭೇಟಿ ನೀಡಿದ್ದೆ. ಈ ಸಂಸ್ಥೆಯು ನಡೆಸುತ್ತಿದ್ದ ಅಂಗವಿಕಲ ಮಕ್ಕಳ ಪಾಲನಾ ಕೇಂದ್ರದಲ್ಲಿ ಫಿಸಿಯೋಥೆರಫಿ ಮತ್ತು ಆರೋಗ್ಯ ಸೇವೆಯ ಜತೆಗೆ ಅಂಗವಿಕಲ ಮಕ್ಕಳ ಪೋಷಕರಿಗೆ ಮಕ್ಕಳ ಆರೈಕೆ ಬಗ್ಗೆ ಮಾರ್ಗದರ್ಶನ ನೀಡಿದ್ದೇವೆ ಎಂದರು.
ಅತಿಥಿಗಳಾಗಿ ಕೇರ್ ಕರ್ನಾಟಕ ಫೌಂಡೇಶನ್‌ನ ಸದಸ್ಯರಾದ ನೆದರ್ ಲ್ಯಾಂಡ್‌ನ ಡಾ.ಹೆನ್ನಿ ಡಿ. ವಿಟ್ ಗ್ರೋಲ್ಸ್, ಜಿಯಾನ್ನ, ರೂಡ್ಡ್ , ಜ್ಞಾನ ದೀಪ್ತಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಫಾದರ್ ಪಿ.ಸಿ.ಮ್ಯಾಥ್ಯೂ,ಫಾದರ್ ಸಿ. ಜೋಸ್ ಚಿರು ಪ್ಲಾವಿಲ್, ಫಾದರ್ ಜೋಸೆಫ್ ಅಚ್ಚಾಂಡಿ, ಪುಷ್ಪಾ ಆಸ್ಪತ್ರೆಯ ವೈದ್ಯ ಡಾ.ಸಿಸ್ಟರ್ ಮೇರಿ ಸೂಸನ್ನ, ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಇದ್ದರು. ಇದೇ ಸಂದರ್ಭದಲ್ಲಿ ರೆ.ಫಾ. ಜೋವಿಯಲ್ ವಡೆಕ್ಕಲ್ ಹಾಗೂ ಇತರ ಅತಿಥಿಗಳನ್ನು ಗೌರವಿಸಲಾಯಿತು.ಶಿಕ್ಷಕಿಯರಾದ ಸಿನಿ ಹಾಗೂ ಸೋನಿ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.