ಸಾರಾಂಶ
ಹಾವೇರಿ: ಶೋಕ ಶೋಕವಾಗಿಯೇ ಉಳಿದರೆ ಸಂಕಟವಾಗುತ್ತದೆ. ಶೋಕ ಸ್ಥಾಯಿ ಭಾವವಾದರೆ ಕರುಳ ರಸವಾಗಿ ರಸಾನಂದ ನೀಡುತ್ತದೆ. ಬದುಕಿನ ಅನುಭವ ಮತ್ತು ಅನುಭೂತಿಯನ್ನು ಗ್ರಹಿಸುವುದೇ ಕಾವ್ಯದ ಲಕ್ಷಣ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅಭಿಪ್ರಾಯಪಟ್ಟರು.ನಗರದ ನೈಸ್ ಅಕಾಡೆಮಿಯಲ್ಲಿ ಗದಗದ ನಿರಂತರ ಪ್ರಕಾಶನ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ಕವಿ ಹಜರೇಸಾಬ ನದಾಫ್ ಅವರ ಬದುಕು ಛಂದ ಗೀತ ಹಾಗೂ ನಕ್ಷತ್ರ ದಾರಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾವನೆಗಳಿಗೆ ಜೀವ ಕೊಡುವ ಕಾರ್ಯ ಮಾಡಿರುವ ಕವಿ ಹಜರೇಸಾಬ ನದಾಫ್ ಅವರ ಕಾವ್ಯಗಳಲ್ಲಿ ಬದುಕಿನ ತಾಕಲಾಟವಿದೆ. ಜಾತಿ ಮತ್ತು ಧರ್ಮಗಳ ಕುರಿತು ವಿಷಾದವಿದೆ ಹಾಗೂ ಸಮಭಾವದ ಹುಡುಕಾಟವಿದೆ ಎಂದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶಪ್ಪ ಎಚ್. ಮಾತನಾಡಿ, ನಕ್ಷತ್ರ ದಾರಿ ಕವನಗಳಲ್ಲಿ ಮನುಷ್ಯ ಪ್ರೀತಿಯಿದೆ. ಬುದ್ಧಿ ಬೆಳೆಸುವ, ಭಾವ ಉಳಿಸುವ ಕಾರ್ಯ ಮಾಡಿರುವ ಹಜರೇಸಾಬ ನದಾಫ್ ಅವರ ಭಾವನೆಗಳು ಸದಾ ನಮ್ಮ ಜೊತೆಗಿವೆ ಎಂದರು.ಗದುಗಿನ ನಿರಂತರ ಪ್ರಕಾಶನದ ಎ.ಎಸ್. ಮಕಾನದಾರ ಮಾತನಾಡಿ, ಸೌಮ್ಯ ಸ್ವಭಾವದ, ಸಾಮರಸ್ಯ ಭಾವದ ಕವಿ ಹಜರೇಸಾಬ ನದಾಫ್ ಅವರು ಆದರ್ಶ ರಾಜ್ಯದ ಅದ್ಭುತ ಕನಸುಗಾರರು. ಬದುಕಿನ ಸ್ತರಗಳಲ್ಲಿ ಎಲ್ಲವನ್ನೂ ಅನುಭವಿಸಿ ಅನುಕರಣೀಯ ವ್ಯಕ್ತಿತ್ವ ಕಟ್ಟಿಕೊಟ್ಟವರು ಎಂದರು.ಉಪನ್ಯಾಸಕಿ ಸಬಿನಾಬಾನು ನದಾಫ್ ಮಾತನಾಡಿ, ನನ್ನ ಪತಿ ಐವತ್ತು ವರ್ಷ ಪೂರ್ಣಗಳಿಸಲು ನಾಲ್ಕು ದಿನಗಳು ಬಾಕಿ ಇರುವಾಗಲೇ ನಮ್ಮನಗಲಿದರು. ಈ ದುಃಖದ ನಡುವೆ ಅವರ ಎರಡು ಕವನ ಸಂಕಲನಗಳನ್ನು ಬಿಡುಗಡೆಗೊಳಿಸುವ ನನ್ನ ಬಹುದಿನದ ಅಭಿಲಾಷೆ ಈಡೇರಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬದುಕು ಛಂದ ಗೀತ ಕವನ ಸಂಕಲನ ಕುರಿತು ಡಾ.ಮಹಾದೇವಿ ಕಣವಿ ಹಾಗೂ ನಕ್ಷತ್ರ ದಾರಿ ಕವನ ಸಂಕಲನ ಕುರಿತು ಡಾ.ಅಂಬಿಕಾ ಹಂಚಾಟೆ ಮಾತನಾಡಿದರು.ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ ಅವರಿಗೆ ನಿರಂತರ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ನರಸಿಂಹ ಕೋಮಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು.ಶಮಸುನ್ನಿಸಾ ಬೇಗಂ, ಪುಷ್ಪಾ ಶಲವಡಿಮಠ, ಮಾರುತಿ ಶಿಡ್ಲಾಪುರ, ಸಲೀಂ ಜವಳಿ, ಚಂದ್ರಶೇಖರ ಕುಳೇನೂರ, ರವಿ ಹುಚ್ಚಗೊಂಡರ, ಈರಣ್ಣ ಬೆಳವಡಿ, ಸಿ.ಎಸ್.ಮರಳಿಹಳ್ಳಿ ಇದ್ದರು. ಅನಿತಾ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ್ ಬೆಟಗೇರಿ ಸ್ವಾಗತಿಸಿದರು. ಗೂಳಪ್ಪ ಅರಳಿಕಟ್ಟಿ ವಂದಿಸಿದರು.ಹಿಂದೂ-ಮುಸ್ಲಿಂ ಜೀವನ ವಿಧಾನಗಳ ಸಂಗಮವಾಗಿರುವ ಸವಣೂರು ನೆಲದ ಹಜರೇಸಾಬ ನದಾಫ್ ಅವರಲ್ಲಿ ವಿಶೇಷ ಗುಣಗಳಿವೆ. ಮುಖ್ಯವಾಗಿ ಶೇರೋ-ಶಾಯರಿ ವಾಸನೆಯ ಹಾಡುಗಳು ಕವನ ಸಂಕಲನಗಳ ಆಕರ್ಷಣೆಯಾಗಿವೆ. ಏಕಾಂತದಲ್ಲಿ ತನ್ನೆಲ್ಲ ನೋವು ನಲಿವುಗಳನ್ನು ಗುಣಿಸಿ-ಭಾಗಿಸಿ, ಕಳೆದು-ಕೂಡಿಸಿ ಉತ್ತರ ಕಂಡುಕೊಳ್ಳುವ ಭಾವಗಣಿತದ ಲೆಕ್ಕಾಚಾರದವು. ಭಾವ ಪ್ರಧಾನ ಕಾವ್ಯಗಳು ಬಿಡುಗಡೆಗೊಂಡಿರುವುದು ಸಾಹಿತ್ಯ ವಲಯಕ್ಕೆ ಪುಷ್ಟಿ ನೀಡುವ ಸಂಗತಿ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.