ಸಾರಾಂಶ
ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಿಯ ರಥೋತ್ಸವ ಓಕಳಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು. ದೇವಾಲಯದಿಂದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಓಕಳಿ ಕಟ್ಟೆಗೆ ತೆರಳಿತು. ನಂತರ ಸಾಂಪ್ರದಾಯಿಕ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಕುಂಕುಮದ ನೀರು ಎರಚುವುದರ ಮೂಲಕ ಓಕಳಿ ಆಡಿದರು. ಭಕ್ತರು ಚಂದ್ರಗುತ್ಯಮ್ಮ ನಿನ್ನಾಲ್ಕು ಉಧೋ.. ಉಧೋ… ಎಂಬ ಘೋಷಣೆಯೊಂದಿಗೆ ಭಕ್ತಿ ಸ್ಮರಣೆಯಲ್ಲಿ ಮಿಂದೆದ್ದರು. ಜಾತ್ರಾ ಮಹೋತ್ಸವದ ಮೂರನೇ ದಿನದ ಓಕಳಿ ಉತ್ಸವಕ್ಕೆ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಜಿ.ಕೆ.ಪ್ರಮೀಳಾ ಕುಮಾರಿ ಅವರು ಚಾಲನೆ ನೀಡಿದರು.ಬಳಿಕ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಗ್ರಾಮದ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ನಾಲ್ಕು ಕಾಲು ಮಂಟಪದಲ್ಲಿ ಸಿಂಹಾಸನದ ಮೇಲೆ ಶ್ರೀ ದೇವಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.ಸೋಮವಾರ ದೇವಸ್ಥಾನದಲ್ಲಿ ತುಲಾಭಾರ ಸೇವೆ ಸೇರಿದಂತೆ ಹರಕೆ ವಗೈರೆ ಮತ್ತು ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿದೆ. ಜಾತ್ರಾ ಮಹೋತ್ಸವದ ಯಶಸ್ವಿಗೆ ದೇವಸ್ಥಾನದ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಪೊಲೀಸ್ ಇಲಾಖೆಯಿಂದ ಉತ್ತಮ ರೀತಿಯಲ್ಲಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಾತ್ರಾ ಮಹೋತ್ಸವದ ಯಶಸ್ವಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಲ್ಲರೂ ಸಹಕಾರಿ ನೀಡಿದ್ದಾರೆ.
-ಮಂಜುಳಾ ಹೆಗಡಾಳ್, ತಹಸೀಲ್ದಾರ್ ಸೊರಬ