ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ:
ತಾಲೂಕಿನ ಗಡಿಸೋಮನಾಳ ಗ್ರಾಮದ ಜಗದ್ಗುರು ಪೂರ್ಣಾನಂದ ಮಹಾಮುನಿಗಳ ಆಶ್ರಮ, ಶೃದ್ದಾನಂದ ಮಠದ ಜಾತ್ರೋತ್ಸವ ಅಂಗವಾಗಿ ನೂತನ ರಥದ ಲೋಕಾರ್ಪಣೆಯೊಂದಿಗೆ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಈ ರಥೋತ್ಸವ ಮುತ್ತೈದೆಯರಿಂದಲೇ ಎಳೆಯಲ್ಪಟ್ಟಿತು.ಜಗದ್ಗುರು ಪೂರ್ಣಾನಂದ ಮಹಾಮುನಿಗಳ ಆಶ್ರಮ, ಶ್ರೀ ಶೃದ್ದಾನಂದ ಮಠದ ಜಾತ್ರೋತ್ಸವ ಅಂಗವಾಗಿ ವಿಶ್ವಶಾಂತಿಗಾಗಿ ಕೋಟಿ ಜಪಯಜ್ಞ ಹಾಗೂ ೨೫ನೇ ಸತ್ಸಂಗ ಸಮ್ಮೇಳನವು ಸೋಮನಕೊಪ್ಪದ ಶೃದ್ದಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು.ಸೋಮವಾರರಂದು ನೂತನ ರಥೋತ್ಸವಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸ, ಧರ್ಮಧ್ವಜದ ಮೆರವಣಿಗೆ ಹಾಗೂ ಫಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆಯು ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ನಂತರ ದೇವಸ್ಥಾನಕ್ಕೆ ಆಗಮಿಸಿ ನೂತನ ರಥಕ್ಕೆ ಕಳಸ ಏರಿಸುವ ಕಾರ್ಯಕ್ರಮ ನಡೆಯಿತು.
ನಂತರ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುತ್ತೈದೆ ಹೆಣ್ಣುಮಕ್ಕಳು ರಥೋತ್ಸವವನ್ನು ದೇವಸ್ಥಾನದಿಂದ ಪ್ರಾರಂಭಗೊಂಡು ಪಾದಗಟ್ಟೆಯವರೆಗೆ ತೆರಳಿ ಮರಳಿ ದೇವಸ್ಥಾನವನ್ನು ತಲುಪಿತು.ರಥೋತ್ಸವ ಸಮಯದಲ್ಲಿ ಗಡಿಸೋಮನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರರು, ಮಹಿಳೆಯರು ಪಾಲ್ಗೊಂಡಿದ್ದರು. ಈ ವೇಳೆ ರಥೋತ್ಸವಕ್ಕೆ ಉತ್ತತ್ತಿ, ಬಾಳೆ ಹಣ್ಣುಗಳನ್ನು ಅರ್ಪಿಸಿ ಇಷ್ಟಾರ್ಥ ಪೂರೈಕೆಗೆ ಪ್ರಾರ್ಥಿಸಿದರು.ಈ ಮಹಾ ರಥೋತ್ಸವದ ನೇತೃತ್ವವನ್ನು ಶ್ರೀಮಠದ ಗಾಂಗೇಯಪಿತ ಮಹಾಸ್ವಾಮಿಗಳು ಒಳಗೊಂಡು ಗ್ರಾಮದ ಮುಖಂಡರು ಹಾಗೂ ಜಾತ್ರಾ ಉತ್ಸವ ಸಮಿತಿಯವರು ವಹಿಸಿದ್ದರು.________