ಜಸ್ಕರನ್ ಸಿಂಗ್ ಹಾಡಿನ ಮೋಡಿ

| Published : Feb 24 2025, 12:31 AM IST

ಸಾರಾಂಶ

ವೇದಿಕೆಗೆ ಅವರ ಪ್ರವೇಶ ಆಗುತ್ತಿದ್ದಂತೆ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ಶಿಳ್ಳೆಯೊಂದಿಗೆ ಹಾಡಿಗೆ ದನಿಗೂಡಿಸಿದರು.

ಹೊನ್ನಾವರ: ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಪ್ರಭಾತನಗರದಲ್ಲಿ ಆಯೋಜಿಸಿದ ಹೊನ್ನಾವರ ಉತ್ಸವದಲ್ಲಿ ಮೂರನೇ ದಿನವಾದ ಶನಿವಾರ ರಾತ್ರಿ ದ್ವಾಪರ ಹಾಡಿನ ಖ್ಯಾತಿಯ ಜಸ್ಕರನ್ ಸಿಂಗ್ ಹಾಡಿನ ಮೋಡಿ ಜನಮನ ಸೆಳೆಯಿತು.ವೇದಿಕೆಗೆ ಅವರ ಪ್ರವೇಶ ಆಗುತ್ತಿದ್ದಂತೆ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ಶಿಳ್ಳೆಯೊಂದಿಗೆ ಹಾಡಿಗೆ ದನಿಗೂಡಿಸಿದರು.ದಿವ್ಯಾ ರಾಮಚಂದ್ರ, ಸಂದೇಶ ನೀಮಾರ್ಗ, ಅಶ್ವಿನ್ ಶರ್ಮ, ಶಿವಾನಿ ತಂಡದಿಂದ ಮ್ಯೂಸಿಕಲ್ ನೈಟ್ ರಸಮಂಜರಿ ಕಾರ್ಯಕ್ರಮ ಸಂಗೀತ ಪ್ರೀಯರ ಗಮನ ಸೆಳೆಯಿತು.

ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿ ಮಾತನಾಡಿ, ಜನರು ಇಚ್ಛಿಸುವ ಇಂಥ ಅದ್ಧೂರಿ ಕಾರ್ಯಕ್ರಮ ಸಂಘಟಿಸುವುದು ಬಹಳ ಕಷ್ಟ. ಇದು ಪ್ರತಿ ವರ್ಷ ನಡೆಸುವಂತಾಗಲಿ. ಇಂಥ ಉತ್ಸವಕ್ಕೆ ನಾವೆಲ್ಲ ಸಹಕಾರ ನೀಡುವ ಮೂಲಕ ಹರಸೋಣ ಎಂದರು.

ಮುಖ್ಯ ಅತಿಥಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ಹೊನ್ನಾವರ ಉತ್ಸವ ಯಶಸ್ವಿಯಾಗಲು ಜನತೆಯ ಸಹಕಾರವೇ ಕಾರಣ. ಕಲೆ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವುದಕ್ಕೆ ನಿಮಗೆಲ್ಲ ಧನ್ಯವಾದ ಸಲ್ಲಿಸುತ್ತೇನೆ. ಹೊನ್ನಾವರದಲ್ಲಿ ವಿಶಾಲ ಮೈದಾನ ಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಪ್ರಯತ್ನಿಸೋಣ ಎಂದರು.

ಹೊನ್ನಾವರ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಂಜುನಾಥ ನಾಯ್ಕ ಮತ್ತು ಶಿವಾನಂದ ಹೆಗಡೆ ಕಡತೋಕಾ ಮಾತನಾಡಿದರು. ಬಿಜೆಪಿ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ, ಕಾಂಗ್ರೆಸ್ ಮುಖಂಡ ವಿನೋದ ನಾಯ್ಕ ಕರ್ಕಿ, ಅಂಕಣಕಾರ ನಾರಾಯಣ ಯಾಜಿ ಸಾಲೆಬೈಲ್, ಉದ್ಯಮಿ ರವಿ ಶೆಟ್ಟಿ ಕವಲಕ್ಕಿ, ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಕ್ರಷ್ಣಾನಂದ ಭಟ್, ಹೊನ್ನಾವರ ಉತ್ಸವ ಸಮಿತಿಯ ವಿನಾಯಕ ಶೆಟ್ಟಿ, ಶ್ರೀರಾಮ ಚಾದೂಗಾರ ಹಾಗೂ ಸದಸ್ಯರು ಉಪಸ್ಥಿತರಿದ್ದರು.