ನವರಾತ್ರಿ ಎಂದರೆ ಶಕ್ತಿ ಆರಾಧನೆಯ ಜತೆಗೆ ಗೊಂಬೆಗಳ ಹಬ್ಬವೂ ಹೌದು. ಆಧುನಿಕತೆಯ ಭರಾಟೆಯಲ್ಲಿ ಮಾರುಕಟ್ಟೆಯ ಕೃತಕ ಗೊಂಬೆಗಳ ಬಳಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಮಿಶ್ರಿಕೋಟಿ ಗ್ರಾಮದ ಗೃಹಿಣಿ ಮಂಜುಳಾ ಸುರೇಗಾವಂಕರ ಅವರು ಜೇಡಿ ಮಣ್ಣಿನಿಂದಲೇ ಗೊಂಬೆ ತಯಾರಿಸಿ ಸಂಪ್ರದಾಯ ಮತ್ತು ಪರಿಸರ ಕಾಳಜಿಗೆ ಹೊಸ ಮೆರುಗು ನೀಡಿದ್ದಾರೆ.

ಈರಪ್ಪ ನಾಯ್ಕರ್

ಕಲಘಟಗಿ:

ನವರಾತ್ರಿ ಎಂದರೆ ಶಕ್ತಿ ಆರಾಧನೆಯ ಜತೆಗೆ ಗೊಂಬೆಗಳ ಹಬ್ಬವೂ ಹೌದು. ಆಧುನಿಕತೆಯ ಭರಾಟೆಯಲ್ಲಿ ಮಾರುಕಟ್ಟೆಯ ಕೃತಕ ಗೊಂಬೆಗಳ ಬಳಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಮಿಶ್ರಿಕೋಟಿ ಗ್ರಾಮದ ಗೃಹಿಣಿ ಮಂಜುಳಾ ಸುರೇಗಾವಂಕರ ಅವರು ಜೇಡಿ ಮಣ್ಣಿನಿಂದಲೇ ಗೊಂಬೆ ತಯಾರಿಸಿ ಸಂಪ್ರದಾಯ ಮತ್ತು ಪರಿಸರ ಕಾಳಜಿಗೆ ಹೊಸ ಮೆರುಗು ನೀಡಿದ್ದಾರೆ.

ತಾಲೂಕಿನ ಮಿಶ್ರಿಕೋಟಿ ಗ್ರಾಮದ ಪ್ಯಾಟಿ ಓಣಿ ಸಮೀಪದ ಸುರೇಶ ಸುರೇಗಾವಂಕರ ಅವರ ಪತ್ನಿ ಮಂಜುಳಾ ಅವರು ಕಳೆದ 20 ವರ್ಷಗಳಿಂದ ತಮ್ಮ ಕೈಚಳಕದಲ್ಲಿ ನೈಸರ್ಗಿಕ ಜೇಡಿ ಮಣ್ಣಿನ ಗೊಂಬೆಗಳನ್ನು ರೂಪಿಸುತ್ತಿದ್ದಾರೆ. ಪೂರ್ವಜರಿಂದ ಬಳುವಳಿಯಾಗಿ ಬಂದ ಹಿತ್ತಾಳೆ ಹಾಗೂ ಕಟ್ಟಿಗೆಯ ಗೊಂಬೆಗಳನ್ನೂ ಪ್ರತಿವರ್ಷ ನವರಾತ್ರಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಕುಟುಂಬದ ಪರಂಪರೆಯನ್ನು ಮುಂದುವರಿಸಿದ್ದಾರೆ.

ಪುರಾಣ, ಗ್ರಾಮೀಣ ಬದುಕು:

ಮಂಜುಳಾ ಅವರ ಗೊಂಬೆಗಳ ಸಂಗ್ರಹದಲ್ಲಿ ಧಾರ್ಮಿಕತೆ, ಪುರಾಣ ಮತ್ತು ಗ್ರಾಮೀಣ ಜೀವನದ ಚಿತ್ರಣ ಒಟ್ಟಿಗೆ ಕಾಣಸಿಗುತ್ತದೆ. ದುರ್ಗಾಮಾತೆ, ವಿಷ್ಣು-ಲಕ್ಷ್ಮೀ, ಶಿವ-ಪಾರ್ವತಿ, ಗಣಪತಿ, ಸರಸ್ವತಿ, ದಶಾವತಾರ, ಅಷ್ಟಲಕ್ಷ್ಮೀಯರು ಹಾಗೂ ಸಪ್ತಮಾತೃಕೆಯರ ಮೂರ್ತಿಗಳನ್ನು ಕಲಾತ್ಮಕವಾಗಿ ರೂಪಿಸಿದ್ದಾರೆ. ಶಂಕರಾಚಾರ್ಯರು, ರಾಘವೇಂದ್ರ ಸ್ವಾಮಿಗಳು ಮತ್ತು ಸದ್ಗುರು ಸಿದ್ಧಾರೂಢರ ಮೂರ್ತಿಗಳೂ ಇಲ್ಲಿವೆ.

ಇದರ ಜತೆಗೆ ಕುಟ್ಟುವುದು, ಬೀಸುವುದು, ಉಡಿ ತುಂಬುವುದು ಹಾಗೂ ಮದುವೆ ಸಮಾರಂಭದಲ್ಲಿ ವಾದ್ಯ ನುಡಿಸುವವರ ಗೊಂಬೆಗಳ ಮೂಲಕ ಗ್ರಾಮೀಣ ಜನ-ಜೀವನವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದಾರೆ. ಪರಿಸರ ಜಾಗೃತಿಯ ಸಂದೇಶ ಸಾರುವ ಕಲಾಕೃತಿಗಳೂ ಇವರ ಸಂಗ್ರಹದಲ್ಲಿವೆ. ಈ ವರ್ಷ ಅಷ್ಟಲಕ್ಷ್ಮೀಯರ ಮೂರ್ತಿಗಳು ವಿಶೇಷ ಆಕರ್ಷಣೆಯಾಗಿವೆ. ಒಟ್ಟಾರೆ ನೂರಕ್ಕೂ ಹೆಚ್ಚು ಗೊಂಬೆಗಳನ್ನು ಸಂಗ್ರಹಿಸಿರುವ ಅವರು, ಬಿಡುವಿನ ಸಮಯವನ್ನು ಸೃಜನಶೀಲ ಕಲೆಗೆ ಮೀಸಲಿಟ್ಟಿದ್ದಾರೆ.

ಗೊಂಬೆಯ ಮನೆ:

ಮನೆಯ ಆವರಣದಲ್ಲಿ ಸಾಂಪ್ರದಾಯಿಕ ಮಾದರಿಯ ಮೆಟ್ಟಿಲು ನಿರ್ಮಿಸಿ, ವಿವಿಧ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಕುಟುಂಬದ ಸದಸ್ಯರ ಸಹಕಾರದಿಂದ ಈ ಪ್ರದರ್ಶನ ಸಿದ್ಧಗೊಳ್ಳುತ್ತದೆ. ನವರಾತ್ರಿ ಸಂದರ್ಭದಲ್ಲಿ ನೆರೆ-ಹೊರೆಯವರು ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸುತ್ತಾರೆ.

ಶರನ್ನವರಾತ್ರಿಯ ಮೊದಲ ದಿನದಿಂದ 9 ದಿನ ಗೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದುರ್ಗಾ ಸಪ್ತಶತಿ, ದೇವಿ ಮಹಾತ್ಮೆ, ವಿಷ್ಣು ಸಹಸ್ರನಾಮ, ಲಕ್ಷ್ಮೀ ಸೋಬಾನ ಪಠಣ, ಭಜನೆ ಹಾಗೂ ಮಹಾಮಂಗಳಾರತಿಯೊಂದಿಗೆ ಆರಾಧನೆ ನೆರವೇರುತ್ತದೆ.

ಮಂಜುಳಾ ಅವರ ಈ ಪ್ರಯತ್ನ ನವರಾತ್ರಿಯ ಸಂಭ್ರಮಕ್ಕೆ ಸೀಮಿತವಾಗದೆ, ಮಣ್ಣಿನ ಕಲೆ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾದರಿಯಾಗಿದೆ.ಹಳೆಯ ಸಂಪ್ರದಾಯ ಉಳಿಸುವುದರ ಜತೆಗೆ ಪರಿಸರವನ್ನು ಕಾಪಾಡುವುದೂ ಅಗತ್ಯ. ಕೃತಕ ಗೊಂಬೆಗಳ ಬದಲಿಗೆ ಸ್ವತಃ ಮಣ್ಣಿನಿಂದ ಗೊಂಬೆಗಳನ್ನು ತಯಾರಿಸಿ ಪೂಜಿಸುವುದರಲ್ಲಿ ಅಪಾರ ತೃಪ್ತಿ ಇದೆ. ಈ ಕಲೆ ಮುಂದಿನ ಪೀಳಿಗೆಗೂ ತಲುಪಬೇಕು ಎಂಬುದೇ ನಮ್ಮ ಆಶಯ.

ಸುರೇಶ ಎಸ್. ಸುರೇಗಾವಂಕರ, ಕಲಾ ಶಿಕ್ಷಕ