ರಾಜ್ಯ ಪೊಲೀಸರ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೆಚ್ಚುಗೆ

| Published : Apr 03 2024, 01:37 AM IST

ರಾಜ್ಯ ಪೊಲೀಸರ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕ್ಲಿಷ್ಟ ಪ್ರಕರಣ ಭೇದಿಸುವ ಮೂಲಕ ರಾಜ್ಯ ಪೊಲೀಸರು ಉತ್ತಮ ಹೆಸರು ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ಗೆ ಉತ್ತಮ ಹೆಸರು ಇದೆ ಎಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಮೆಚ್ಚುಗೆ ಸೂಚಿಸಿದ್ದಾರೆ.

ಕೋರಮಂಗಲದ ಕೆಎಸ್‌ಆರ್‌ಪಿ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ರಾಜ್ಯ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಪೊಲೀಸ್‌ ಕಾರ್ಯವೈಖರಿ, ನಿಪುಣತೆ, ಕಾರ್ಯದಕ್ಷತೆಗೆ ರಾಷ್ಟಮಟ್ಟದಲ್ಲಿ ಒಳ್ಳೇಯ ಹೆಸರು ಇದೆ. ಹಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವ ಮುಖಾಂತರ ಉತ್ತಮ ಹೆಸರು ಗಳಿಸಿದ್ದಾರೆ. ಪೊಲೀಸರಲ್ಲಿ ನಾಯಕತ್ವ ಗುಣಗಳು ಉತ್ತಮವಾಗಿವೆ. ಕಾರ್ಯದಕ್ಷತೆಯಿಂದ ಗುರುತಿಸಿಕೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದನಾರ್ಹರು ಎಂದರು.

ನಾನು ಈ ಹಿಂದೆ ಗೃಹ ಇಲಾಖೆ ಕಾರ್ಯದರ್ಶಿಯಾಗಿ ಪೊಲೀಸ್‌ ಇಲಾಖೆಯ ಸವಾಲುಗಳು ಹಾಗೂ ಕೆಲಸದ ಒತ್ತಡಗಳು, ಜವಾಬ್ದಾರಿಗಳನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ಮೂಲಸೌಕರ್ಯ, ಆಧುನಿಕ ತಂತ್ರಜ್ಞಾನ, ಸಿಬ್ಬಂದಿ ನೇಮಕ, ತರಬೇತಿ ಸೇರಿದಂತೆ ಅವಶ್ಯಕತೆಗಳನ್ನು ಪೂರೈಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

ಕಳೆದ ವರ್ಷ ರಾಜ್ಯದಲ್ಲಿ ಯಶಸ್ವಿಯಾಗಿ ವಿಧಾನಸಭೆ ಚುನಾವಣೆ ನಡೆಸಲಾಗಿದೆ. ಯಾವುದೇ ಸಮಸ್ಯೆಗಳಾಗದಂತೆ ಚುನಾವಣೆ ನಡೆದಿದೆ. ಇದೀಗ ಲೋಕಸಭಾ ಚುನಾವಣೆ ಎದುರಾಗಿದೆ. ಶಾಂತಿಯುತ ಚುನಾವಣೆ ನಡೆಸಲು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇಲಾಖೆ ಮೇಲಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಚುನಾವಣೆ ನಡೆಸಲು ಅಗತ್ಯವಿದೆ ಎಂದು ತಿಳಿಸಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮೀಸಲು ಪಡೆಯ ಎಡಿಜಿಪಿ ಉಮೇಶ್‌ ಕುಮಾರ್‌ ಉಪಸ್ಥಿತರಿದ್ದರು.