ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರದಲ್ಲಿ ಮೃತರ ಅಂತ್ಯಕ್ರಿಯೆಗೆ ಕೋಟಿ ಕೋಟಿ ಸುರಿದು ನಿರ್ಮಿಸಿದ ಅನಿಲ ಚಿತಗಾರ ಮಾತ್ರ ಅನಾಥವಾಗಿದೆ.ನಗರದಲ್ಲಿ ಜಾಗದ ಸಮಸ್ಯೆಯಿಂದ ಸ್ಮಶಾನ ಸಮಸ್ಯೆಗೆ ಪರಿಹಾರ ಸಿಗದೇ ಜನ ಪರದಾಡುವಂತಾಗಿದೆ. ಮೃತರ ಅಂತ್ಯ ಸಂಸ್ಕಾರಕ್ಕೆ ಇಂಚು ಜಾಗ ಸಿಗದೇ ಮೃತರನ್ನು ಹೂತ ಶವಗಳ ಮೇಲೆ ಮತ್ತೊಂದು ಶವವನ್ನು ಅಂತ್ಯ ಸಂಸ್ಕಾರ ಮಾಡುವ ದುಸ್ಥಿತಿ ಸ್ಮಶಾನಗಳಲ್ಲಿ ನಿರ್ಮಾಣವಾಗಿದೆ.
ಕೆಲ ಸಮುದಾಯಗಳಿಗೆ ಸ್ಮಶಾನಕ್ಕಾಗಿ ಪ್ರತ್ಯೇಕ ಜಾಗ ಇದ್ದರೂ ಕೆಲವೊಂದು ಬಡ ಹಾಗೂ ಮಧ್ಯಮ ವರ್ಗದ ಸಮುದಾಯಗಳಿಗೆ ಸ್ಮಶಾನಕ್ಕಾಗಿ ಜಾಗದ ಸಮಸ್ಯೆ ಇಂದಿಗೂ ಕಾಡುತ್ತಿದೆ. ಇಂತಹವರಿಗೆ ಅನುಕೂಲವಾಗಲೆಂದು ನಗರದ ಹೊರ ವಲಯದ ಕೈಗಾರಿಕಾ ಎಸ್ಟೇಟ್ ಬಳಿ (ಹಳೆ ಆರ್‌ಟಿಒ ಕಚೇರಿ) ನಗರಸಭೆಯಿಂದ ಬರೋಬರಿ 1.80 ಕೋಟಿ ರು.ಗಳ ವೆಚ್ಚದಲ್ಲಿ ಅನಿಲ ಚಿತಗಾರವನ್ನು ನಿರ್ಮಿಸಲಾಗಿದ್ದರೂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ 3 ವರ್ಷಗಳಿಂದ ಉದ್ಘಾಟನೆಗೊಳ್ಳದೇ ಕಟ್ಟಡ ಶಿಥಿಲಗೊಳ್ಳುತ್ತಿದೆ.ವಿಶೇಷ ಅನುದಾನದಲ್ಲಿ ನಿರ್ಮಾಣ:
2018ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಚಿಕ್ಕಬಳ್ಳಾಪುರ ನಗರಸಭೆಗೆ ಬಜೆಟ್‌ನಲ್ಲಿ ವಿಶೇಷ ಅನುದಾನ 50 ಕೋಟಿ ರು. ಘೋಷಿಸಿದ್ದರು. ಅದೇ ಅನುದಾನ ಬಳಸಿಕೊಂಡೇ ನಗರದಲ್ಲಿನ ಸ್ಮಶಾನ ಸಮಸ್ಯೆಗೆ ಅಧುನಿಕವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅದರಲ್ಲೂ ಎಲ್ಲಾ ವರ್ಗದ ಸಮುದಾಯಗಳಿಗೆ ಅನುಕೂಲವಾಗಲೆಂದು 1.80 ಕೋಟಿ ರು. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಅತ್ಯಾಧುನಿಕವಾದ ಅನಿಲ ಚಿತಗಾರ ನಿರ್ಮಾಣಕ್ಕೆ ನಗರಸಭೆ ನಿರ್ಧರಿಸಿ ಆಸಕ್ತಿಯಿಂದ ಕಾಮಗಾರಿಗೆ 2019ರಲ್ಲಿಯೆ ಚಾಲನೆ ನೀಡಿತು. ಆದರೆ ಕಾಮಗಾರಿ ಮುಗಿದು ಸದ್ಯ ಸುಮಾರು ಮೂರು ವರ್ಷಗಳ ಮೇಲೆ ಆದರೂ ಅದನ್ನು ಸಾರ್ವಜನಿಕರ ಬಳಕೆಗೆ ಬಳಸುವಲ್ಲಿ ನಗರಸಭೆ ಅಧಿಕಾರಿಗಳು ಮುಂದಾಗದೇ ಇರುವುದು ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ.2019 ರಲ್ಲಿ ಆರಂಭಗೊಂಡ ಮಹಾಮಾರಿ ಕೋವಿಡ್ ಸೋಂಕಿನ ಪರಿಣಾಮ ಸತತ ಮೂರು ವರ್ಷಗಳ ಕಾಲ 2020, 2021 ರಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಮೃತರ ಸಂಬಂಧಿಕರು ಸಾಕಷ್ಟು ಪರದಾಡಿದ್ದರು. ಆಗಷ್ಟೇ ಅನಿಲ ಚಿತಗಾರ ನಿರ್ಮಾನದ ಕೆಲಸ ಮುಕ್ಕಾಲು ಭಾಗ ಪೂರ್ಣಗೊಂಡಿತ್ತು. ಕೋವಿಡ್ ಸಂಕಷ್ಟದ ವೇಳೆಗೆ ಸಿದ್ದಗೊಳ್ಳಬೇಕಿದ್ದ ಅನಿಲ ಚಿತಗಾರ ಕಾಲಮಿತಿಯೊಳಗೆ ಕಾಮಗಾರಿ ನಡೆಯದೇ 2021ಕ್ಕೆ ಮುಗಿದಿದೆ. ಆದರೆ ಕಾಮಗಾರಿ ಮುಗಿದರೂ ಚಿತಗಾರ ಬಳಕೆಗೆ ಇನ್ನೂ ಮೋಕ್ಷ ಕೂಡಿಬಾರದೇ ಇರುವುದು ನಗರಸಭೆ ಅಧಿಕಾರಿಗಳ ಅಸಡ್ಡೆ ಮನೋಭಾವವನ್ನು ಎತ್ತಿ ತೋರಿಸುತ್ತಿದೆ.
ಚಿಕ್ಕಬಳ್ಳಾಪುರ ಬಳಿ ಆದಿಯೋಗಿ ಪ್ರತಿಮೆ ಸ್ಥಾಪಿಸಿರುವ ಇಶಾ ಕೇಂದ್ರದ ಸ್ವಯಂ ಸೇವಕರು ಉಚಿತವಾಗಿ ಚಿತಗಾರದ ನಿರ್ವಹಣೆಗೆ ತಾವೇ ನಿರ್ವಹಿಸುತ್ತೇವೆಂದು ಮುಂದೆ ಬಂದಿದ್ದರು. ಈ ಸಂಬಂಧ ಒಂದು ಹಂತದಲ್ಲಿ ಜಿಲ್ಲಾಡಳಿತದೊಂದಿಗೆ ಮಾತುಕತೆ ಸಹ ನಡೆದಿತ್ತು. ಆದರೆ ಈ ಬಗ್ಗೆ ಮತ್ತೆ ಪ್ರಸ್ತಾಪ ಆಗಲೇ ಇಲ್ಲ.2024ರ ಫೆಬ್ರವರಿ 6 ರಂದು ನಡೆದ ನಗರಸಭೆ ಬಜೆಟ್ ಪೂರ್ವ ಭಾವಿಸಭೆಯಲ್ಲಿ ಶೀಘ್ರವೇ ಚಿತಾಗಾರ ಆರಂಭ ಮಾಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ ಆರಂಭ ಮಾತ್ರ ಆಗಲಿಲ್ಲ. ಅದೇ ರೀತಿ ನಗರಸಭೆಯ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಎ.ನಾಗರಾಜ್ ನೇತೃತ್ವದಲ್ಲಿ 2024ರ ಸೆಪ್ಟೆಂಬರ್‌ನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸ್ಮಶಾನಗಳ ಸ್ವಚ್ಛ ಮಾಡುವ ವೇಳೆ 2022 ರ ಡಿಸೆಂಬರ್‌ನಲ್ಲಿಯೇ ಚಿತಾಗಾರಕ್ಕೆ ಯಂತ್ರೋಪಕರಣಗಳನ್ನು ಸಹ ಅಳವಡಿಸಲಾಗಿತ್ತು. ಶೀಘ್ರದಲ್ಲಿಯೇ ಚಿತಾಗಾರ ಬಳಕೆಗೆ ಮುಕ್ತವಾಗಲಿದೆ ಎಂದು ಹೇಳಿದ್ದರು.
ಆದರೆ ಕಾಮಗಾರಿ ಪೂರ್ಣವಾಗಿ ಇಷ್ಟು ದಿನವಾದರೂ ಚಿತಾಗಾರದ ಬಾಗಿಲು ತೆರೆದಿಲ್ಲ. ಇದರ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ಆದರೆ ಸೇವೆ ಇನ್ನೂ ಸಮರ್ಪಣೆಯಾಗದೆ ಜನರ ಸಮಸ್ಯೆ ಮುಂದುವರಿದಿದೆ ಮತ್ತು ಮುಂದುವರೆಯುತ್ತಾ ಇದೆ.ಸಿಕೆಬಿ-1 ಕೋಟಿ ಕೋಟಿ ಸುರಿದು ನಿರ್ಮಿಸಿದ ಚಿತಾಗಾರ ಉಧ್ಘಾಟನೆಯಾಗದೇ ಅನಾಥವಾಗಿದೆ