ಸಾರಾಂಶ
ಮುಂಡರಗಿ: ಕಳೆದ 17 ವರ್ಷಗಳಿಂದ ತಮಗೆ ವಿದ್ಯೆ ಬುದ್ಧಿ ನೀಡಿ ಬದುಕಿನ ಪಾಠ ಕಲಿಸಿದ ತಮ್ಮ ನೆಚ್ಚಿನ ಶಿಕ್ಷಕ ಬೇರೊಂದು ಊರಿಗೆ ವರ್ಗಾವಣೆಗೊಂಡು ಹೋಗುವಾಗ ಅಲ್ಲಿನ ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತು ಬೀಳ್ಕೊಟ್ಟ ಘಟನೆ ತಾಲೂಕಿನ ಕಕ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುನಗನಹಳ್ಳಿ ಗ್ರಾಮದ ಶಿಕ್ಷಕ ರಮೇಶ ಎಲ್. ಅವರು ಕಳೆದ 17 ವರ್ಷಗಳಿಂದ ಕಕ್ಕೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬೊಮ್ಮನಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.ಶಿಕ್ಷಕ ರಮೇಶ 2007ರ ಜೂನ್ 22ರಿಂದ ಇದೇ ಸೆ. 26ರ ಗುರುವಾರದ ವರೆಗೂ ಮಕ್ಕಳಿಗೆ ನಿತ್ಯ ಗಣಿತ ಹಾಗೂ ವಿಜ್ಞಾನ ವಿಷಯವನ್ನು ಬೋಧಿಸುತ್ತ ಬಂದಿದ್ದರು. ಉತ್ತಮವಾಗಿ ಪಾಠ ಮಾಡುತ್ತ ಮಕ್ಕಳ ಮನಸ್ಸನ್ನು ಹಾಗೂ ಗ್ರಾಮದಲ್ಲಿನ ಗುರು-ಹಿರಿಯರು ಮತ್ತು ಪಾಲಕರ ಮನಸ್ಸನ್ನು ಗೆದ್ದಿದ್ದರು. ಜೊತೆಗೆ ಶಾಲೆ ಬಿಟ್ಟ ಮಕ್ಕಳಿಗೆ ತಿಳಿ ಹೇಳಿ ಅವರನ್ನು ಮರಳಿ ಶಾಲೆಗೆ ತರುವಲ್ಲಿಯೂ ಯಶಸ್ವಿಯಾಗಿದ್ದರು.
ಗುರುವಾರ ಶಿಕ್ಷಕ ರಮೇಶ ಅವರು ವರ್ಗಾವಣೆಯಾಗಿ ಹೋಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳೆಲ್ಲರೂ ಬಿಕ್ಕಿ ಬಿಕ್ಕಿ ಅಳುತ್ತ ಸರ್ ನೀವ್ ನಮ್ಮೂರ್ ಬಿಟ್ ಹೋಗಬ್ಯಾಡ್ರಿ. ಇಲ್ಲೇ ಇರ್ರೀ ಸರ್ ಎಂದು ಅಂಗಲಾಚಿದ್ದು ಕಂಡು ಬಂದಿತು.ಕಳೆದ 17 ವರ್ಷಗಳ ಕಾಲ ಈ ಗ್ರಾಮದ ಎಲ್ಲ ಜನತೆ ನನಗೆ ಪ್ರೋತ್ಸಾಹಿಸಿ, ಪೋಷಿಸಿದ್ದಾರೆ. ಇಲ್ಲಿನ ಮಕ್ಕಳು ತುಂಬಾ ಮುಗ್ದರು. ಅವರೆಲ್ಲರಿಗೂ ಉತ್ತಮವಾಗಿ ಪಾಠ ಬೋಧಿಸಿದ ತೃಪ್ತಿ ನನಗಿದೆ. ಆದರೆ ಸರ್ಕಾರದ ನಿಯಮದಂತೆ ವರ್ಗಾವಣೆ ಅನಿವಾರ್ಯ. ನನಗೆ ವರ್ಗಾವಣೆಯಾಗಿರುವ ಸುದ್ದಿಕೇಳಿ ಮಕ್ಕಳು ಅಳುವುದನ್ನು ಕಂಡು ನಾನೂ ಅವರನ್ನು ಬಿಟ್ಟು ಹೋಗಲು ಅತ್ತಿದ್ದೇನೆ ಎಂದು ವರ್ಗಾವಣೆಗೊಂಡ ಶಿಕ್ಷಕ ರಮೇಶ ಎಲ್ ತಿಳಿಸಿದರು.
ಶಿಕ್ಷಕ ರಮೇಶ ಅವರು ಗಣಿತ ಹಾಗೂ ವಿಜ್ಞಾನ ವಿಷಯದ ಶಿಕ್ಷಕರಾಗಿ ಶಾಲೆಯಲ್ಲಿ ಮಕ್ಕಳಿಗೆ ಮನಮುಟ್ಟುವಂತೆ ಪಾಠ ಮಾಡುವುದರ ಜೊತೆಗೆ ಎಲ್ಲ ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅವರ ವರ್ಗಾವಣೆಯಿಂದ ನಮಗೆಲ್ಲರಿಗೂ ಬೇಸರವಾಗಿದೆ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಇಂದ್ರಾ ಮ್ಯಾಗೇರಿ ತಿಳಿಸಿದ್ದಾರೆ.