ಸಾರಾಂಶ
ಮುಡಾ ತನಿಖೆ ಆರಂಭದ ಬೆನ್ನಲ್ಲೇ ಇಡೀ ಸಚಿವ ಸಂಪುಟ ಹಾಗೂ ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಬೆನ್ನಿಗೆ ನಿಂತು ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎನ್ನುತ್ತಿರುವ ಈ ಹಂತದಲ್ಲೇ ಹಿರಿಯ ನಾಯಕ ಮಾಜಿ ಸಚಿವ ಕೆ.ಬಿ.ಕೋಳಿವಾಡ ಅವರು ಪಕ್ಷಕ್ಕೆ ಮುಜುಗರ ತಪ್ಪಿಸಲು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಡಾ ತನಿಖೆ ಆರಂಭದ ಬೆನ್ನಲ್ಲೇ ಇಡೀ ಸಚಿವ ಸಂಪುಟ ಹಾಗೂ ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಬೆನ್ನಿಗೆ ನಿಂತು ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎನ್ನುತ್ತಿರುವ ಈ ಹಂತದಲ್ಲೇ ಹಿರಿಯ ನಾಯಕ ಮಾಜಿ ಸಚಿವ ಕೆ.ಬಿ.ಕೋಳಿವಾಡ ಅವರು ಪಕ್ಷಕ್ಕೆ ಮುಜುಗರ ತಪ್ಪಿಸಲು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.ತನ್ಮೂಲಕ ಕಾಂಗ್ರೆಸ್‌ನೊಳಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಮೊದಲ ಆಗ್ರಹ ಕೇಳಿಬಂದಂತಾಗಿದೆ. ಈ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸದ್ಯ ರಾಜೀನಾಮೆ ನೀಡುವುದು ಒಳ್ಳೆಯದು. ಕಳಂಕರಹಿತರಾದ ಮೇಲೆ ಮತ್ತೆ ಅಧಿಕಾರಕ್ಕೆ ಮರಳಲಿ ಎಂದು ಸಲಹೆ ನೀಡಿದರು.
ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಸಿದ್ದರಾಮಯ್ಯ ಅವರು ಇದುವರೆಗೆ ಒಂದೂ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ನಂ.1 ಮುಖ್ಯಮಂತ್ರಿ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಈಗ ವಿರೋಧ ಪಕ್ಷದವರ ಕುತಂತ್ರದಿಂದ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆಪಾದನೆ ಬಂದಿದೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತನಿಖೆಯಲ್ಲಿ ಕಳಂಕ ರಹಿತರಾಗಿ ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು.ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಇರುವ ಮುಡಾ ಪ್ರಕರಣವನ್ನು ಮುಂಬರುವ ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿ ಬಳಸಿಕೊಂಡು ಬಿಜೆಪಿಯವರು ಲಾಭ ಪಡೆಯುವ ಪ್ರಯತ್ನ ಮಾಡಲಿದ್ದಾರೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್‌ಗೆ ಮುಜುಗರ ತರುವ ಕುತಂತ್ರವನ್ನು ಮೋದಿ ಮತ್ತು ಅವರ ತಂಡ ನಡೆಸುತ್ತಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಕಳಂಕರಹಿತರಾದರೂ ಪಕ್ಷದ ಹಿತದೃಷ್ಟಿಯಿಂದ ಸದ್ಯಕ್ಕೆ ರಾಜೀನಾಮೆ ನೀಡಲಿ. ತನಿಖೆಯಲ್ಲಿ ನಿಷ್ಕಳಂಕರಾಗಿ ಹೊರಬಂದ ಬಳಿಕ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ. 136 ಶಾಸಕರೂ ಅವರ ಜೊತೆಗಿದ್ದಾರೆ, ಮುಂದೆಯೂ ಇರುತ್ತಾರೆ ಎಂದು ಅವರು ಹೇಳಿದರು.