ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುವಿಶ್ವ ಹಿಂದೂ ಪರಿಷತ್‌ನ ಸೇವಾ ಪ್ರಕಲ್ಪ ಗೋವನಿತಾಶ್ರಯ ಟ್ರಸ್ಟ್ ಹಾಗೂ ಶ್ರೀ ಗೋವರ್ಧನ ಪೂಜಾ ಸಮಿತಿ ವತಿಯಿಂದ ‘ಗೋವರ್ಧನ ಪೂಜೆ’ ಹಾಗೂ ‘ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ’ ಕಾರ್ಯಕ್ರಮದ ಸಮಾರೋಪ ಸಮಾರಂಭ ನಗರದ ಕದ್ರಿ ಮೈದಾನದಲ್ಲಿ ಭಾನುವಾರ ನಡೆಯಿತು.ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ಕ್ಯಾ.ಬೃಜೇಶ್ ಚೌಟ, ಗೋ ಸೇವೆ ಮಾಡುವುದೆಂದರೆ ಪುಣ್ಯದ ಕಾರ್ಯ. ಗೋವಿನ ಪಾಲನೆ ಮಾಡುವುದು ಸನಾತನ ಸಂಸ್ಕೃತಿಯ ಭಾಗವೇ ಆಗಿದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಭಾರತೀಯ ಸಂಸ್ಕೃತಿ, ಇಲ್ಲಿನ ಜೀವನ ಪದ್ಧತಿಯ ಬಗ್ಗೆ ವಿದೇಶಿಯರೂ ಹೆಮ್ಮೆ ಪಡುತ್ತಾರೆ. ಸನಾತನ ಜೀವನ ಪದ್ಧತಿಯಿಂದ ವಿಶ್ವದಲ್ಲಿ ಶಾಂತಿ ನೆಲೆಯೂರಲು ಸಾಧ್ಯ. ಅಷ್ಟು ಮಹತ್ವ ಭಾರತೀಯ ಜೀವನ ಪದ್ಧತಿಗೆ ಇದೆ ಎಂದರು.
ಉದ್ಯಮಿ ಎಂ. ಪ್ರಶಾಂತ್ ಶೇಟ್ ಮಾತನಾಡಿ, ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಗೋವಿನ ರಕ್ಷಣೆಯೂ ಆಗಬೇಕಿದೆ. ನಮ್ಮ ಸಂಸ್ಕೃತಿ - ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಗೋವುಗಳನ್ನು ಪಾಲಿಸುವುದು ಅತಿ ಅಗತ್ಯ ಎಂದರು.ಗೋಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗೌರವಿಸಲಾಯಿತು. ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಗೋವನಿತಾಶ್ರಯ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಪಾಲಿಕೆ ಸದಸ್ಯ ಮನೋಹರ್ ಶೆಟ್ಟಿ, ಉದ್ಯಮಿ ಅಶೋಕ್ ಕುಮಾರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಗೋವನಿತಾಶ್ರಯ ಟ್ರಸ್ಟ್‌ನ ಕೋಶಾಧಿಕಾರಿ ಶರಣ್ ಪಂಪ್‌ವೆಲ್, ಟ್ರಸ್ಟಿಗಳಾದ ಡಾ.ಪಿ.ಅನಂತಕೃಷ್ಣ ಭಟ್, ಗೋಪಾಲ ಕುತ್ತಾರ್ ಇದ್ದರು.
ಶ್ರೀ ಗೋವರ್ಧನ ಪೂಜಾ ಸಮಿತಿ ಅಧ್ಯಕ್ಷ ಜಗದೀಶ್ ಶೇಣವ ಸ್ವಾಗತಿಸಿದರು. ಬಜರಂಗದಳ ವಿಭಾಗ ಸಹಸಂಯೋಜಕ ಪುನೀತ್ ಅತ್ತಾವರ ವಂದಿಸಿದರು. ಉಪಾಧ್ಯಕ್ಷ ಸುಧಾಕರ ರಾವ್ ಪೇಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಅಸೈಗೋಳಿ ನಿರೂಪಿಸಿದರು.