ಸಾರಾಂಶ
ವಿಜಯಪುರ: ಸುಕ್ಷೇತ್ರ ದ್ಯಾಬೇರಿಯ ತಾಯಿ ವಾಗ್ದೇವಿ ಸನ್ನಿಧಿಯಲ್ಲಿ ನಡೆದ ನೂತನ ದೇವಾಲಯ ಕಟ್ಟಡ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.ಬಳಿಕ ಮಾತನಾಡಿದ ಅವರು, ಮುಂದಿನ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಪ್ರತಿಯೊಬ್ಬರೂ ಸುಖ, ಸಮೃದ್ಧಿಯಿಂದ ಜೀವನ ನಡೆಸಲಿ ಎಂದು ತಾಯಿ ವಾಗ್ದೇವಿಯಲ್ಲಿ ಪ್ರಾರ್ಥಿಸಿರುವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮುಂದಿನ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಪ್ರತಿಯೊಬ್ಬರೂ ಸುಖ, ಸಮೃದ್ಧಿಯಿಂದ ಜೀವನ ನಡೆಸಲಿ ಎಂದು ತಾಯಿ ವಾಗ್ದೇವಿಯಲ್ಲಿ ಪ್ರಾರ್ಥಿಸಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಸುಕ್ಷೇತ್ರ ದ್ಯಾಬೇರಿಯ ತಾಯಿ ವಾಗ್ದೇವಿ ಸನ್ನಿಧಿಯಲ್ಲಿ ನಡೆದ ನೂತನ ದೇವಾಲಯ ಕಟ್ಟಡ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿ ವಾಗ್ದೇವಿಯ ದ್ಯಾಬೇರಿ ಭಕ್ತಿಭಾವದ ಪವಿತ್ರ ಕ್ಷೇತ್ರವಾಗಿದೆ. ವಾಗ್ದೇವಿ ಎಲ್ಲರಿಗೂ ಒಳಿತು ಮಾಡಲಿ. ಮುಂದಿನ ಮುಂಗಾರು ಮಳೆ ಉತ್ತಮವಾಗಿ, ಒಳ್ಳೆಯ ಬೆಳೆ ಬರಲಿ ಎಲ್ಲರೂ ಖುಷಿಯಿಂದ ಇರುವಂತೆ ವಾಗ್ದೇವಿ ಕರುಣಿಸಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವೆ ಎಂದರು.
ಶ್ರೀ ವಾಗ್ದೇವಿ ಸೇವಾ ಸಮಿತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಕೆರೆಗಳಿಗೆ ನೀರು ತುಂಬಿಸೋ ಯೋಜನೆಯಲ್ಲಿ ನೀರಿನಿಂದ ಭರ್ತಿಯಾಗಿದ್ದ ದ್ಯಾಬೇರಿ ಕೆರೆಗೆ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ವಾಗ್ದೇವಿ ದೇವಸ್ಥಾನಕ್ಕೆ ತೆರಳಿದರು.ಗರ್ಭಗುಡಿ ಪ್ರವೇಶಕ್ಕೆ ಸಿಎಂ ನಿರಾಕರಣೆ: ಗರ್ಭಗುಡಿಯ ಬಾಗಿಲಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ನಿಂತಿದ್ದಾಗ ದೇವಸ್ಥಾನದ ಪೂಜಾರಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ. ಪಾಟೀಲರನ್ನು ಗರ್ಭಗುಡಿಯಲ್ಲಿ ಬರಲು ಹೇಳಿದರು. ಆಗ ಒಲ್ಲೆ ಪೂಜೆ ಮಾಡಿ ಎಂದು ಸನ್ನೆಯ ಮೂಲಕವೇ ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.