ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಸಿಎಂ ಮುಂದಾಗಲಿ

| Published : Jul 22 2025, 12:00 AM IST

ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಸಿಎಂ ಮುಂದಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರದಲ್ಲಿನ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಮೈಸೂರಿನಲ್ಲಿ ಒಟ್ಟು 234 ಪಾರಂಪರಿಕ ಕಟ್ಟಡಗಳಿದ್ದು, ಈ ಪೈಕಿ 129 ಅಧಿಕೃತ ಪಾರಂಪರಿಕ ಕಟ್ಟಡ ಎಂದು ಗುರುತಿಸಲಾಗಿದೆ. ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಸ್ಕೃತ ಪಾಠಶಾಲೆ, ಪ್ರಾಚ್ಯವಸ್ತು ಸಂಗ್ರಹಾಲಯಗಳ ಕೇಂದ್ರ ಸೇರಿದಂತೆ ಅನೇಕ ಕಟ್ಟಡಗಳು ದುಸ್ಥಿತಿಗೆ ತಲುಪಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಐತಿಹ್ಯವುಳ್ಳ, ಪ್ರಖ್ಯಾತ ನಾಮರು ಓದಿದ, ವಾಸಿಸಿದ ನಗರದ ಪಾರಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂರಕ್ಷಿಸಬೇಕು ಎಂದು ಮಾಜಿ ಮೇಯರ್‌ ಶಿವಕುಮಾರ್‌ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ಪಾರಂಪರಿಕ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಮೈಸೂರಿನಲ್ಲಿ ಒಟ್ಟು 234 ಪಾರಂಪರಿಕ ಕಟ್ಟಡಗಳಿದ್ದು, ಈ ಪೈಕಿ 129 ಅಧಿಕೃತ ಪಾರಂಪರಿಕ ಕಟ್ಟಡ ಎಂದು ಗುರುತಿಸಲಾಗಿದೆ. ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಸ್ಕೃತ ಪಾಠಶಾಲೆ, ಪ್ರಾಚ್ಯವಸ್ತು ಸಂಗ್ರಹಾಲಯಗಳ ಕೇಂದ್ರ ಸೇರಿದಂತೆ ಅನೇಕ ಕಟ್ಟಡಗಳು ದುಸ್ಥಿತಿಗೆ ತಲುಪಿವೆ ಎಂದು ದೂರಿದರು.

ಬಿಎಂಶ್ರೀ, ಕುವೆಂಪು, ಡಾ. ದೇಜಗೌ, ಎಸ್‌.ಎಂ.ಕೃಷ್ಣ, ರಾಧಾಕೃಷ್ಣನ್, ಆರ್‌.ಕೆ. ನಾರಾಯಣ ಸೇರಿದಂತೆ ಅನೇಕ ಮಹನೀಯರು ಓದಿದ ತಿರುಗಾಡಿದ ಮಹಾರಾಜ ಕಾಲೇಜು ಮತ್ತು ಹಾಸ್ಟೆಲ್‌ ತೀರಾ ದುಸ್ಥಿತಿಯಲ್ಲಿದೆ. ಅಂತೆಯೇ ಯುವರಾಜ ಕಾಲೇಜಿನ ಗ್ರಂಥಾಲಯ ಕಟ್ಟಡದ ಭಾಗವು ಅದೋಗತಿಗೆ ತಲುಪಿದೆ. ಮಹಾರಾಜ ಕಾಲೇಜಿಗೆ 170 ವರ್ಷವಾದರೆ, ಯುವರಾಜ ಕಾಲೇಜು ಶತಮಾನೋತ್ಸವ ದಾಟಿದೆ. ಇಂತಹ ಕಟ್ಟಡಗಳನ್ನು ಸಂರಕ್ಷಿಸಬೇಕಿರುವುದು ನಮ್ಮ ಕರ್ತವ್ಯ ಎಂದರು.

ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಯೋಗನಗರಿ ಎಂದು ಹೆಸರುಗಳಿಸಲು ಕಾರಣರಾದ ಕೃಷ್ಣಮಾಚಾರ್ಯರು, ಬಿವಿಕೆ ಅಯ್ಯಂಗಾರ್‌ಮುಂತಾದವರು ಇಲ್ಲಿ ಯೋಗ ತರಗತಿ ಆರಂಭಿಸಿದ್ದರು. ಅಂತಹ ಕಟ್ಟಡಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಯುವರಾಜ ಕಾಲೇಜು ಹಿಂಭಾಗದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸುಮಾರು 46 ಸಾವಿರ ತಾಳೆಗರಿಗಳು ಇದೆ. ಕೌಟಿಲ್ಯನ ಅರ್ಥಶಾಸ್ತ್ರದ ತಾಳೆಗರಿಗಳೂ ಇವೆ. ಇಂತಹ ಕಟ್ಟಡ ನಮ್ಮ ಪಾರಂಪರಿಕತೆಯ ಪ್ರತೀಕದಂತಿದೆ ಎಂದರು.

ವಾಣಾವಿಲಾಸ ರಸ್ತೆಯಲ್ಲಿ ಹೆಣ್ಣು ಮಕ್ಕಳ ಅನಾಥಾಲಯವನ್ನು ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿದೆ. ಅದೂ ಕೂಡ ದುಸ್ಥಿತಿಯಲ್ಲಿದೆ. ಕೆ.ಆರ್‌. ವೃತ್ತದಲ್ಲಿನ ನೆಲಮಳಿಗೆ ಬಿರುಕು ಬಿಟ್ಟಿದೆ. ದೊಡ್ಡಗಡಿಯಾರದ ನವೀಕರಣ ಆಗಿಲ್ಲ. ನಾನು ಮೇಯರ್‌ಆಗಿದ್ದ ಅವಧಿಯಲ್ಲಿ 35 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದೆ. ಆದರೆ ನಮ್ಮ ಅವಧಿಯ ನಂತರ ಅಧಿಕಾರಿಗಳು ಟೆಂಡರ್‌ಕರೆಯದೇ ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

ಲಲಿತಮಹಲ್ ಕಟ್ಟಡದಲ್ಲಿಯೂ ಗಿಡಗಳು ಬೆಳೆದಿದೆ. ಅಗ್ನಿಶಾಮಕ ಠಾಣೆ ಕುಸಿದು ಎಷ್ಟೋ ವರ್ಷವಾಯಿತು. ಇನ್ನು ನಗರದ ಮಹಾರಾಣಿ ಕಾಲೇಜು, ಹಳೇ ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ಬಸ್‌ನಿಲ್ದಾಣದ ಎದುರು, ಸರ್ಕಾರಿ ಅತಿಥಿಗೃಹದ ಎದುರು, ಮಹಾರಾಣಿ ಕಾಲೇಜು ಸಮೀಪದ ಕಮಾನ್‌ಗೇಟು, ವೀರನಗೆರೆಯ ಕಾವಲು ಕಂಬಗಳು ಗಿಡಗಳಿಂದ ಆವೃತ್ತವಾಗಿದೆ ಎಂದರು.

ಅಧಿಕಾರಿಗಳನ್ನು ಕೇಳಿದರೆ ಕಟ್ಟಡ ನಿರ್ವಹಣೆಗೆ ಹಣವಿಲ್ಲ ಎನ್ನುತ್ತಾರೆ. ಈ ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ಅವರು ಹತ್ತು ಕಟ್ಟಡಗಳ ಅಭಿವೃದ್ಧಿಗೆ 96 ಕೋಟಿ ರೂ. ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಕೂಡಲೇ ಮುಖ್ಯಮಂತ್ರಿಗಳು ಪಾರಂಪರಿಕ ಕಟ್ಟಡಗಳ ಬಗ್ಗೆ ವರದಿ ತರಿಸಿಕೊಳ್ಳಬೇಕು. ಕಟ್ಟಡಗಳ ಮೌಲ್ಯ ನಿಮಗೆ ಗೊತ್ತಿದೆ. ಆದ್ದರಿಂದ ಕಟ್ಟಡಗಳನ್ನು ತಾತ್ಸಾರ ಮಾಡಬೇಡಿ ಎಂದು ಅವರು ಮನವಿ ಮಾಡಿದರು.

ನಮ್ಮ ಈ ಮನವಿಗೆ ಮುಖ್ಯಮಂತ್ರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಸಂಸದರು, ಶಾಸಕರು ಮತ್ತು ನಗರ ಪಾಲಿಕೆ ಎಲ್ಲಾ ಮಾಜಿ ಸದಸ್ಯರೊಡನೆ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿ ಗಮನ ಸೆಳೆಯುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮೇಯರ್‌ ರೂಪಾ ಯೋಗೇಶ್‌, ನಗರ ಪಾಲಿಕೆಯ ಮಾಜಿ ವಿಪಕ್ಷ ನಾಯಕರಾದ ಬಿ.ವಿ. ಮಂಜುನಾಥ್‌, ಸುಬ್ಬಯ್ಯ, ಬಿಜೆಪಿ ಮುಖಂಡ ರಂಗಸ್ವಾಮಿ ಇದ್ದರು.